ಬೆಂಗಳೂರು: ಹಿರಿಯ ಕೈ ನಾಯಕರಿಗೆ ದೋಸ್ತಿ ಸರ್ಕಾರ ಇದೀಗ ಅಪಥ್ಯವಾಗಿ ಪರಿಣಮಿಸುತ್ತಿದೆ. ಸಾಕಪ್ಪಾ ಮೈತ್ರಿ ಸರ್ಕಾರದ ಸಹವಾಸ ಎಂಬ ಭಾವನೆ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಮೂಡ ತೊಡಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಗುರುವಾರ ರಾತ್ರಿ ನಡೆದ ಕಾಂಗ್ರೆಸ್ ಹಿರಿಯರ ಸಭೆಯಲ್ಲಿ ಇಂಥಹದೊಂದು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದ ಸಭೆಯಲ್ಲಿ ಮೈತ್ರಿ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಾಜಿತ ಕೈ ಲೋಕಸಭಾ ಅಭ್ಯರ್ಥಿಗಳು ಹಾಗೂ ವಿಧಾನಸಭಾ ಅಭ್ಯರ್ಥಿಗಳು ಮೈತ್ರಿ ಸರ್ಕಾರದ ವಿರುದ್ಧ ತಮ್ಮ ಅಸಹನೆ, ಸಿಟ್ಟನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.
ಸರ್ಕಾರ ಇದ್ದರೆ ಎಷ್ಟು, ಬಿಟ್ರೆ ಎಷ್ಟು!?:
ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪ, ದ್ರುವನಾರಾಯಣ, ಬಸವರಾಜ ರಾಯರೆಡ್ಡಿ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವರು ತಮ್ಮ ಅಸಮಾಧಾನವನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಒಂದೊಂದು ಕೆಲಸ ಮಾಡಿಸಲು ಹತ್ತಾರು ಬಾರಿ ಕರೆ ಮಾಡಬೇಕು. ಹೀಗಿದ್ದಾಗ ಯಾವ ಪುರುಷಾರ್ಥಕ್ಕೆ ದೋಸ್ತಿ ಸರ್ಕಾರ ನಡೆಸಬೇಕು ಎಂಬುದು ಹಿರಿಯ ಮುಂಖಡರ ಖಡಕ್ ಪ್ರಶ್ನೆಯಾಗಿತ್ತು. ಸರ್ಕಾರ ಉಳಿಸಿಕೊಳ್ಳುವುದರಲ್ಲೇ ಕಾಲ ವ್ಯಯವಾಗುತ್ತಿದ್ದರೆ ಆಡಳಿತ ನಡೆಸುವುದು ಯಾವಾಗ ಎಂದು ತಮ್ಮ ಆಕ್ರೋಶವನ್ನು ಹೊರಗೆಡವಿದ್ದಾರೆ ಎಂದು ಹೇಳಲಾಗಿದೆ.
ಹೈಕಮಾಡ್ಗೆ ನಿಜ ಸ್ಥಿತಿ ತಿಳಿಸಿ:
ಮೈತ್ರಿ ಸರ್ಕಾರದ ಕಾರ್ಯವೈಖರಿ, ಕಾಂಗ್ರೆಸ್ ಶಾಸಕರ ಪರ ದೋಸ್ತಿ ಸರ್ಕಾರದ ನಿರ್ಲಕ್ಷ್ಯ, ಮೈತ್ರಿಯಿಂದ ಕಾಂಗ್ರೆಸ್ಗೆ ಆಗುತ್ತಿರುವ ನಷ್ಟವನ್ನು ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ರಾಜ್ಯ ಕೈ ನಾಯಕರಿಗೆ ಹಿರಿಯ ಮುಖಂಡರು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರದ ಈ ಧೋರಣೆಯಿಂದಲೇ ಲೋಕಸಭಾ ಚುನಾವಣೆಯಲ್ಲಿ ನಾವು ಸೋಲು ಕಾಣಬೇಕಾಯಿತು. ಮೈತ್ರಿಯಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ ಎಂಬುದನ್ನು ಹೈಕಮಾಂಡ್ಗೆ ಮನಗಾಣಿಸುವುದು ಒಳಿತು ಎಂಬ ಭಾವನೆಯನ್ನು ಹಿರಿಯರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.