ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣದ ಅಬ್ಬರ ಜೋರಾಗಿದೆ. ಇಲ್ಲಿಯವರೆಗೆ ಜಪ್ತಿ ಮಾಡಿದ ನಗದು, ಮದ್ಯ, ವಸ್ತುಗಳ ಮೌಲ್ಯ 100 ಕೋಟಿ ರೂಪಾಯಿ ಮೀರಿದೆ. ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ 108.78 ಕೋಟಿ ರೂ ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಚುನಾವಣೆ ವೇಳೆ ಈ ಅವಧಿಯಲ್ಲಿ ಜಪ್ತಿ ಮಾಡಲಾದ ಅಕ್ರಮ ನಗದು, ಮದ್ಯ, ವಸ್ತುಗಳ ಮೌಲ್ಯ 20.12 ಕೋಟಿ ರೂ. ಆಗಿತ್ತು.
ಈ ಬಾರಿ ಈಗಾಗಲೇ 100 ಕೋಟಿ ರೂ. ಮೊತ್ತದ ವಸ್ತುಗಳು, ನಗದನ್ನು ವಶಕ್ಕೆ ಪಡೆಯಲಾಗಿದೆ. ಅಂದರೆ ಕಳೆದ ಬಾರಿಗೆ ಹೋಲಿಸಿದರೆ 5.40 ಪಟ್ಟು ಹೆಚ್ಚು. ಒಟ್ಟು ಜಪ್ತಿ ಮಾಡಿದ ನಗದು 37.24 ಕೋಟಿ ರೂ., ಫ್ರೀಬೀಸ್ಗಳ ಮೌಲ್ಯ 15.80 ಕೋಟಿ ರೂ., ಮದ್ಯ 26.68 ಕೋಟಿ ರೂ. ಮೊತ್ತ, ಡ್ರಗ್ಸ್ ಮತ್ತು ಮಾದಕ ವಸ್ತುಗಳ ಮೊತ್ತ 11.54 ಕೋಟಿ ರೂ., ಚಿನ್ನ 14.96 ಕೋಟಿ ರೂ., ಇತರ ಅಮೂಲ್ಯ ವಸ್ತುಗಳು 2.56 ಕೋಟಿ ರೂ. ಆಗಿದೆ.
ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು ರೂ.37.24 ಕೋಟಿ ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 26.68 ಕೋಟಿ ರೂ ಮೌಲ್ಯದ 5,23,987 ಲೀಟರ್ ಮದ್ಯ ವಶಪಡಿಸಿಕೊಂಡಿವೆ. ಈವರೆಗೆ ಒಟ್ಟು 965 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದೆ.
6,306 ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಅಬಕಾರಿ ಇಲಾಖೆ 1,138 ಗಂಭೀರ ಪ್ರಕರಣಗಳನ್ನು ಹಾಗೂ ಮದ್ಯದ ಪರವಾನಗಿ ಉಲ್ಲಂಘಿಸಿದ 768 ಪ್ರಕರಣಗಳು, 49 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 3,771 ಪ್ರಕರಣಗಳನ್ನು ದಾಖಲಿಸಿವೆ. 743 ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 59,815 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 13 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 11 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 2,611 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 3,837 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ ಎಂದು ಆಯೋಗ ತಿಳಿಸಿದೆ. ಸ್ಥಿರ ಕಾವಲು ತಂಡಗಳು ಚಿಕ್ಕಪೇಟೆ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 8.17 ಕೋಟಿ ಮೌಲ್ಯದ ಡ್ರಗ್ಸ್ನ್ನು ವಶಕ್ಕೆ ಪಡೆದುಕೊಂಡಿದೆ.
ಇದನ್ನೂ ಓದಿ: ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ವಿಶ್ವಾಸವಿದೆ: ಬಿ.ಎಸ್.ಯಡಿಯೂರಪ್ಪ