ಬೆಂಗಳೂರು : ಕೊರೊನಾ ಆತಂಕದ ನಡುವೆ ಎರಡನೇ ದಿನವೂ ರಾಜ್ಯಾದ್ಯಂತ ವಿದ್ಯಾರ್ಥಿಗಳು ನಿರಾತಂಕವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎದುರಿಸಿದರು.
ರಾಜ್ಯಾದ್ಯಂತ ಇಂದು ಒಟ್ಟು 1,94,356 ಹಾಗೂ ಬೆಂಗಳೂರಿನಲ್ಲಿ40,200 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸಿಲಿಕಾನ್ ಸಿಟಿಯ 83 ಸೇರಿ ರಾಜ್ಯಾದ್ಯಂತ ಒಟ್ಟು 497 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬೆಳಿಗ್ಗೆ 10: 30 ರಿಂದ 11:50 ರವರೆಗೆ ರಸಾಯನಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ 3:30 ರವರೆಗೆ ಭೌತಶಾಸ್ತ್ರ ಪರೀಕ್ಷೆ ನಿಗದಿಯಾಗಿತ್ತು.
ಬೆಂಗಳೂರು:
ನಗರದ ಪರೀಕ್ಷಾ ಕೇಂದ್ರಗಳಲ್ಲೊಂದಾದ ಸೇಂಟ್ ಜೋಸೆಫ್ ಕಾಲೇಜಿಗೆ ಬೆಳಿಗ್ಗೆಯಿಂದಲೇ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಆಗಮಿಸಿದ್ದರು.
ನಗರದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಥರ್ಮಲ್ ಚೆಕ್, ಸ್ಯಾನಿಟೈಸ್ ಮಾಡಲಾಯಿತು.
ಕೊರೊನಾ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೂ ಕೂಡ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಜಿಕೆವಿಕೆ ಮತ್ತು ಜ್ಞಾನಭಾರತಿ ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿತ್ತು. ಇಲ್ಲಿ ಒಟ್ಟು 51 ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.