ಬೆಂಗಳೂರು: ರಮೇಶ್ ಜಾರಕಿಹೊಳಿ ಯಾಕೆ ಅತೃಪ್ತರಾದರು, ಯಾಕೆ ರಾಜೀನಾಮೆಗೆ ಮುಂದಾದರು, ಅವರ ಬೇಡಿಕೆ ಏನು ಎಂಬುದು ಈಗಲೂ ನನಗೆ ಎಂಟನೇ ಅದ್ಭುತ ಎನಿಸಿದೆ. ಆದರೆ ರಾಜೀನಾಮೆಗೆ ಬಿಜೆಪಿ ನಾಯಕರ ಕೈವಾಡ, ಒತ್ತಡ ಖಂಡಿತಾ ಕಾರಣವಲ್ಲ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದ ಅರಣ್ಯ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂದೆ ಅವರ ಮೂವರು ಅಳಿಯಂದಿರ ಕೈವಾಡ ಇರೋದು ಸ್ಪಷ್ಟ. ಅವರ ರಾಜೀನಾಮೆ ಇನ್ನೂ ಖಚಿತ ಆಗಿಲ್ಲ. ರಾಜಿನಾಮೆ ಕನ್ಫರ್ಮ್ ಆದರೆ ಗೋಕಾಕ್ಗೆ ಲಖನ್ ಜಾರಕಿಹೊಳಿಯವರನ್ನು ಅಭ್ಯರ್ಥಿಯಾಗಿ ಮಾಡಬೇಕು ಎಂಬ ಇಚ್ಛೆ ಇದೆ ಎಂದು ಮತ್ತೊಮ್ಮೆ ದೃಢಪಡಿಸಿದರು. ಅಲ್ಲದೆ ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.
ರಮೇಶ್ ಜಾರಕಿಹೊಳಿ ಅತೃಪ್ತಿ ಹಾಗೂ ರಾಜೀನಾಮೆಗೆ ಬಿಜೆಪಿ ನಾಯಕರ ಕೈವಾಡ, ಒತ್ತಡ ಖಂಡಿತಾ ಕಾರಣವಲ್ಲ. ವೈಯಕ್ತಿಕ ಕಾರಣಗಳಿಗೆ ಅವರು ಹೀಗೆ ರಾಜೀನಾಮೆ ಕೊಟ್ಟಿದ್ದಾರೆ. ತಾವು ಬಿಜೆಪಿಯಲ್ಲಿ ಇರುವ ಕಾರಣಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ರಮೇಶ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ರಮೇಶ್ ಮತ್ತು ನಮ್ಮ ನಡುವೆ ಕಳೆದ ಆರು ತಿಂಗಳಿನಿಂದ ಯಾವ ಸಂಪರ್ಕವೂ ಇಲ್ಲ. ನಮ್ಮ ರಾಜಕೀಯ, ವ್ಯವಹಾರ ಎಲ್ಲವೂ ಬೇರೆ ಬೇರೆ. ಹಾಗಾಗಿ ಹೆಚ್ಚು ಖಚಿತವಾಗಿ ರಾಜೀನಾಮೆಗೆ ಕಾರಣ ಗೊತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.