ಬೆಂಗಳೂರು: ಹೆಚ್1ಎನ್1 ಸೋಂಕಿನ ಭೀತಿಯಿಂದ ಜರ್ಮನಿ ರಾಷ್ಟ್ರ ಮೂಲದ ಎಸ್ಎಪಿ ಸಂಸ್ಥೆ ಫೆಬ್ರವರಿ 20 ರಿಂದ 28ರವರೆಗೂ ಭಾರತದ ದೆಹಲಿ, ಗುರುಗ್ರಾಮ ಹಾಗೂ ಬೆಂಗಳೂರಿನ ಕಚೇರಿಗಳನ್ನು ಬಂದ್ ಮಾಡಿ ಆದೇಶಿಸಿದೆ.

ವರ್ಕ್ ಫ್ರಮ್ ಹೋಮ್ ಅಂದರೆ ಮನೆಯಿಂದಲೇ ಕೆಲಸ ಮಾಡಿ ಎಂದು ಸಂಸ್ಥೆಯು ಉದ್ಯೋಗಿಗಳಿಗೆ ಆದೇಶ ಪತ್ರದಲ್ಲಿ ಹೇಳಿದೆ. ಫೆಬ್ರವರಿ 28ರವರೆಗೂ ಮಾರತ್ತಹಳ್ಳಿಯ ಕಚೇರಿಯನ್ನು ಶುಚಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ವಿವರಿಸಿದೆ.
ಮೂಲಗಳ ಪ್ರಕಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಉದ್ಯೋಗಿಗಳಿಗೆ ಹೆಚ್1ಎನ್1 ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಕಾರಣದಿಂದ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ತೆರಳುವಂತೆ ಸಂಸ್ಥೆ ಸೂಚನೆ ನೀಡಿದೆ. ಕಳೆದ ವರ್ಷ ಹೆಚ್1ಎನ್1 ಸೋಂಕಿಗೆ ಸುಮಾರು 49 ಸಾವಿರ ಜನ ವಿಶ್ವಾದ್ಯಂತ ಸಾವನ್ನಪ್ಪಿದ್ದರು.