ಬೆಂಗಳೂರು: ಡಿ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಸಿಸಿಬಿ ತನಿಖಾಧಿಕಾರಿಗಳ ಮುಂದೆ ಹೊಸ ವರಸೆ ಶುರು ಮಾಡಿದ್ದಾರೆ.
ಎರಡು ದಿನಗಳ ಪೊಲೀಸ್ ವಶಕ್ಕೆ ಪಡೆದುಕೊಂಡಿರುವ ಸಂಪತ್ ರಾಜ್ನನ್ನು ಇಂದು ಮಡಿವಾಳ ಇಂಟ್ರಾಗೇಷನ್ ಸೆಂಟರ್ಗೆ ಕರೆದೊಯ್ದು ಸಿಸಿಬಿ, ಎಸಿಪಿ ವೇಣುಗೋಪಾಲ್ ವಿಚಾರಣೆ ಆರಂಭಿಸುತ್ತಿದ್ದಂತೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ತನಿಖಾಧಿಕಾರಿಗಳು ಸಂಪತ್ ರಾಜ್‌ಗೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಂತೆ ಕೆಂಡಾಮಂಡಲನಾದ ಸಂಪತ್, 'ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿಸುವುದೇ ಆಗಿದ್ದರೆ, ಹಿಂದೂಗಳ ಕೈಯಲ್ಲೇ ಆ ಕೆಲಸ ಮಾಡಿಸುತ್ತಿದ್ದೆ. ಅದಕ್ಕಾಗಿ ಮುಸ್ಲಿಂರನ್ನು ಯಾಕೆ ಬಳಸಿಕೊಳ್ಳಬೇಕಿತ್ತು? ನಾವೆಲ್ಲ ಓಡಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿಯನ್ನು ಗೆಲ್ಲಿಸಿದ್ದೇವೆ.
ಪ್ರತಿಭಟನಾಕಾರರರು ಗಲಭೆ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ಆಪ್ತ ಕಾರ್ಯದರ್ಶಿಗಳಾಗಿದ್ದ ಅರುಣ್ ಮತ್ತು ಸಂತೋಷ್ ನನ್ನನ್ನು ಭೇಟಿಯಾಗಿದ್ದು ನಿಜ. ಹಾಗಂತ ಬೆಂಕಿ ಹಚ್ಚಿ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ನನಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ನನ್ನ ಪಾತ್ರವೇನು ಇದರಲ್ಲಿ ಇಲ್ಲ ಎಂದಿದ್ದಾರೆ.
ನನಗೆ ಕಳೆದ ತಿಂಗಳು ಕೋವಿಡ್ ಬಂದಿದ್ದರಿಂದ ಯಾರಿಗೂ ತೊಂದರೆಯಾಗಬಾರದು ಎಂದು ಐಸೊಲೇಷನ್ ಆಗಿದ್ದೆ. ನಾನು ಎಲ್ಲಿಯೂ ತಲೆ ಮರೆಸಿಕೊಂಡು ಓಡಿ ಹೋಗಿರಲಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಯಾರಿಗೂ ತೊಂದರೆ ಆಗಬಾರದೆಂದು ಐಸೊಲೇಷನ್ ಆಗಿದ್ದೆ. ಎಂಎಲ್ಎ ಮನೆಗೆ ಬೆಂಕಿ ಹಾಕಿದವರಿಗೂ, ನನಗೂ ಸಂಬಂಧವಿಲ್ಲ.
ಗಲಭೆ ನಡೆದಾಗ ನಾನೊಬ್ಬ ಜನಪ್ರತಿನಿಧಿಯಾಗಿ ಏರಿಯಾದಲ್ಲಿ ನಡೆಯುತ್ತಿದ್ದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೆ. ಈ ಕಾರಣಕ್ಕೆ ನನ್ನ ಮೊಬೈಲ್ ಟವರ್ ಲೋಕೆಷನ್ ಏರಿಯಾ ಸುತ್ತಮುತ್ತ ಸಿಕ್ಕಿದೆ. ಮೇಯರ್ ಆಗಿದ್ದ ನಾನು ಶಾಸಕರೊಬ್ಬರ ಮನೆಗೆ ಬೆಂಕಿ ಹಾಕಿಸುವ ನೀಚ ಕೆಲಸಕ್ಕೆ ಕೈ ಹಾಕುವವನಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಸಂಪತ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.