ಬೆಂಗಳೂರು: ಬೆಳೆದು ದೊಡ್ಡವರಾದಾಗ ಬಾಲ್ಯದಲ್ಲಿರುವ ಮುಗ್ದತೆ ಇರುವುದಿಲ್ಲ. ಆದರೆ ಸಾಲುಮರದ ತಿಮ್ಮಕ್ಕನ ಮುಖದಲ್ಲಿ ಅದು ಉಳಿದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಸಾಲುಮರದ ತಿಮ್ಮಕ್ಕಗೆ 'ನ್ಯಾಷನಲ್ ಗ್ರೀನರಿ ಅವಾರ್ಡ್ 2020' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರದ ರಾಯಭಾರಿ ತಿಮ್ಮಕ್ಕ: ಸಾಲುಮರದ ತಿಮ್ಮಕ್ಕನಿಗೆ ಪರಿಸರದ ರಾಯಭಾರಿ ಅನ್ನೋ ಪದವಿ ಕೊಡುತ್ತೇವೆ. ಇದನ್ನು ಪ್ರಸಾರ ಮಾಡಲು ವಿಶೇಷವಾದ ಸ್ಥಾನಮಾನ ನೀಡುತ್ತೇವೆ. ಎಲ್ಲಾ ರೀತಿಯ ವಾಹನ ವ್ಯವಸ್ಥೆ ಹಾಗೂ ಯಾವುದೇ ರಾಜ್ಯಕ್ಕೆ ಹೋದರೂ ಅವರ ಖರ್ಚನ್ನು ಸರ್ಕಾರ ಭರಿಸುತ್ತೆ. ಮಾಹಿತಿಗೆ ವೆಬ್‌ಸೈಟ್ ಮಾಡುತ್ತೇವೆ ಎಂದು ಸಿಎಂ ಭರವಸೆ ಕೊಟ್ಟರು.
ಇದನ್ನೂ ಓದಿ:ಕೇಶವ ಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ: ಸಂಘ ಪರಿವಾರದ ನಾಯಕರ ಜೊತೆ ಸಭೆ
ನಮ್ಮ ವಾರ್ತಾ ಇಲಾಖೆಯಿಂದ ವಿಶೇಷವಾದ ವೆಬ್ ಸಿರೀಸ್ ಮಾಡ್ತೀವಿ. ಅವರಿಗೆ ಹತ್ತು ಎಕರೆ ಜಮೀನು ಕೊಡ್ತೀವಿ. ಈಗಾಗಲೇ ಬಿಡಿಎ ಸೈಟ್ ಕೊಟ್ಟಿದ್ದೇವೆ. ಆ ಸೈಟಿಗೆ ತಂತಿ ಬೇಲಿ ಹಾಕಿಸಲು ಬಿಡಿಎ ಆಯುಕ್ತರಿಗೆ ಸೂಚಿಸುತ್ತೇನೆ. ಅಲ್ಲಿ ಮನೆ ಕಟ್ಟಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರೂಪಕರ ಯಡವಟ್ಟು: ನಾಡಗೀತೆಯ ಬಗ್ಗೆ ವೇದಿಕೆ ಗಣ್ಯರಿಗೆ ಸರಿಯಾಗಿ ಮಾಹಿತಿ ನೀಡದೆ, ಪ್ರಸಾರ ಮಾಡಿದ ಆಯೋಜಕರು ಗಲಿಬಿಲಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಮಹೇಂದ್ರ ಮನ್ನೊತ್ತ್ ಅವರು ಚಿತ್ರೀಕರಿಸಿದ ನಾಡಗೀತೆ ಪ್ರಸಾರ ಮಾಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಳಿತೇ ಇದ್ದ ಸಿಎಂ, ಸಚಿವ ಸೋಮಣ್ಣ, ಮಾಜಿ ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಎಲ್ಲಾ ಗಣ್ಯರು ಕೆಲವು ಹೊತ್ತಿನ ಬಳಿಕ ಎಚ್ಚೆತ್ತು ಎದ್ದು ನಿಂತರು. ಇದಕ್ಕೆ ಸಚಿವ ಸೋಮಣ್ಣ ನಿರೂಪಕರ ವಿರುದ್ಧ ಗರಂ ಆದರು.