ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದ್ದು, ಅದಕ್ಕಾಗಿ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಎರಡು ಕ್ಷೇತ್ರದಲ್ಲಿ ಒಟ್ಟು 1,008 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.
ಮತದಾನದ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೇ, ಎರಡು ಕ್ಷೇತ್ರದಲ್ಲಿ ತಲಾ ಮೂರು ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 678 ಮತಗಟ್ಟೆ ಹಾಗೂ ಶಿರಾ ಕ್ಷೇತ್ರದಲ್ಲಿ 330 ಮತಗಟ್ಟೆ ಸೇರಿ ಒಟ್ಟು 1,008 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.
ಕಣದಲ್ಲಿ 31 ಮಂದಿ: ಚುನಾವಣಾ ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳಿದ್ದು, ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಸೇರಿದಂತೆ 16 ಮಂದಿ ಅಖಾಡದಲ್ಲಿದ್ದು, ಬಿಜೆಪಿ-1, ಕಾಂಗ್ರೆಸ್-1, ಜೆಡಿಎಸ್-1, ನೋಂದಾಯಿತ ರಾಜಕೀಯ ಪಕ್ಷದಿಂದ 4 ಮತ್ತು 9 ಮಂದಿ ಪಕ್ಷೇತರರು ಸ್ಪರ್ಧಿಸಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಸೇರಿದಂತೆ 15 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಪೈಕಿ ಬಿಜೆಪಿ -1, ಕಾಂಗ್ರೆಸ್-1, ಜೆಡಿಎಸ್-1, ಸಿಪಿಐ-1, ನೋಂದಾಯಿತ ರಾಜಕೀಯ ಪಕ್ಷದಿಂದ 3 ಮತ್ತು 8 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.
ಆರ್, ಆರ್. ನಗರದಲ್ಲಿ ಮತದಾರರೆಷ್ಟು?: ಆರ್.ಆರ್.ನಗರ ಕ್ಷೇತ್ರದಲ್ಲಿ ಒಟ್ಟು 4,62,201 ಮತದಾರರಿದ್ದಾರೆ. ಅದರಲ್ಲಿ 2,41,049 ಪುರುಷರು, 2,21,073 ಮಹಿಳೆಯರು ಹಾಗೂ 79 ಇತರೆ ಮತದಾರರಿದ್ದಾರೆ. 18 ರಿಂದ 19 ವರ್ಷದ 6,581 ಮತದಾರರಿದ್ದಾರೆ.
ಶಿರಾದಲ್ಲಿರುವ ಮತದಾರರೆಷ್ಟು?: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,15,725 ಮತದಾರರಿದ್ದು, ಇದರಲ್ಲಿ 1,10,281 ಪುರುಷರು, 1,05,034 ಮಹಿಳೆಯರು ಮತ್ತು 10 ಇತರೆ ಮತದಾರರಿದ್ದಾರೆ. 5,768 ಮತದಾರರು 18 ರಿಂದ 19 ವರ್ಷದವರು ಹೊಸ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮತ ಚಲಾಯಿಸಲು ಪರ್ಯಾಯ ದಾಖಲೆಗಳು: ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಜರು ಪಡಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ದಾಖಲೆ ಸಲ್ಲಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಮತ ಚಲಾಯಿಸಲು ಪರ್ಯಾಯ ದಾಖಲಾತಿಯಾದ ಆಧಾರ್ ಕಾರ್ಡ್, ನರೇಗಾ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಸಂಸದರು, ಶಾಸಕರು ನೀಡಿದ ಅಧಿಕೃತ ಗುರುತಿನ ಚೀಟಿ, ಪದವಿ ಪ್ರಮಾಣ ಪತ್ರ, ವಿಕಲಚೇತನ ಪ್ರಮಾಣ ಪತ್ರವನ್ನು ಸಹ ಹಾಜರುಪಡಿಸಿ ಮತದಾನ ಚಲಾಯಿಸಬಹುದಾಗಿದೆ.
ವಿಕಲಚೇತನರಿಗೆ ವಾಹನಗಳ ವ್ಯವಸ್ಥೆ: ಆರ್.ಆರ್.ನಗರ ಕ್ಷೇತ್ರದಲ್ಲಿ 293 ವಿಕಲಚೇತನ ಮತದಾರರಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 3,900 ವಿಕಲಚೇತನ ಮತದಾರರಿದ್ದು, ಅವರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಆರ್.ಆರ್.ನಗರದಲ್ಲಿ 200 ವೀಲ್ ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ. 144 ವಾಹನಗಳು ಸಿದ್ದವಿದೆ. ಶಿರಾ ಕ್ಷೇತ್ರದಲ್ಲಿ 224 ವೀಲ್ ಚೇರ್, 66 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಇವಿಎಂ-ವಿವಿಪ್ಯಾಟ್ : ಆರ್.ಆರ್.ನಗರ ಕ್ಷೇತ್ರದಲ್ಲಿ ಈಗಾಗಲೇ 3020 ಬ್ಯಾಲೆಟ್ ಯೂನಿಟ್, 1458 ಕಂಟ್ರೋಲ್ ಯೂನಿಟ್ ಮತ್ತು 1450 ವಿವಿಪ್ಯಾಟ್‌ಗಳಿವೆ. ಹೆಚ್ಚುವರಿಯಾಗಿ 1888 ಬ್ಯಾಲೆಟ್ ಯೂನಿಟ್, 1424 ಕಂಟ್ರೋಲ್ ಯೂನಿಟ್ ಮತ್ತು 1431 ವಿವಿಪ್ಯಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 801 ಬ್ಯಾಲೆಟ್ ಯೂನಿಟ್, 801 ಕಂಟ್ರೋಲ್ ಯೂನಿಟ್ ಮತ್ತು 801 ವಿವಿ ಪ್ಯಾಟ್‌ಗಳಿವೆ. ಹೆಚ್ಚುವರಿಯಾಗಿ 798 ಬ್ಯಾಲೆಟ್ ಯೂನಿಟ್, 770 ಕಂಟ್ರೋಲ್ ಯೂನಿಟ್, 762 ವಿವಿಪ್ಯಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಸಿಬ್ಬಂದಿ, ಪೊಲೀಸರ ನಿಯೋಜನೆ: ಮತದಾನದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗವು ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿ 4203 ಮತದಾನ ಸಿಬ್ಬಂದಿ, 156 ಎನ್ಫೋರ್ಸ್‌ಮೆಂಟ್ ಸಿಬ್ಬಂದಿ, 115 ಮೈಕ್ರೋ ಸಿಬ್ಬಂದಿ, 2623 ರಾಜ್ಯ ಪೊಲೀಸರು, 300 ಶಸ್ತ್ರಾಸ್ತ್ರ ಮೀಸಲು ಪಡೆ ಸಿಬ್ಬಂದಿ, 381 ಬೂತ್ ಮಟ್ಟದ ಅಧಿಕಾರಿಗಳು, 146 ಚಾಲಕರು, ನೆರವಿಗಾಗಿ 5 ಸಿಬ್ಬಂದಿ, 1586 ಇತರೆ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಶಿರಾ ಕ್ಷೇತ್ರದಲ್ಲಿ ಒಟ್ಟು 3857 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1588 ಮತದಾನ ಸಿಬ್ಬಂದಿ, 128 ಎನ್ಫೋರ್ಸ್‌ಮೆಂಟ್ ಸಿಬ್ಬಂದಿ, 33 ಮೈಕ್ರೋ ವೀಕ್ಷಕರು, 866 ರಾಜ್ಯ ಪೊಲೀಸರು, 270 ಶಸ್ತ್ರಾಸ್ತ್ರ ಮೀಸಲು ಪಡೆ, 267 ಬೂತ್‌ಮಟ್ಟದ ಅಧಿಕಾರಿಗಳು, 139 ಚಾಲಕರು, ನೆರವಿಗಾಗಿ 9 ಸಿಬ್ಬಂದಿ, ಇತರರು 557 ಮಂದಿಯನ್ನು ನಿಯೋಜಿಸಲಾಗಿದೆ ಎಂದು ಆಯೋಗ ತಿಳಿಸಿದೆ.