ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮತ ಎಣಿಕೆ ಆರನೇ ಸುತ್ತು ಮುಕ್ತಾಯವಾಗಿದ್ದು, ಯಾವುದೇ ಪಕ್ಷದ ಅಭ್ಯರ್ಥಿಗಳು ಇದುವರೆಗೂ ಕೇಂದ್ರದತ್ತ ಮುಖ ಮಾಡಿಲ್ಲ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಒಂದೊಂದೇ ಸುತ್ತಿನಲ್ಲಿ ಅಂತರ ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದಾರೆ. 7ನೇ ಸುತ್ತಿನ ಮತ ಎಣಿಕೆ ಮುಗಿದ ಸಂದರ್ಭ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ಅಂತರವನ್ನು 19,772 ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ಸುತ್ತಿನಲ್ಲೂ ಭಾರಿ ಮುನ್ನಡೆ ಸಾಧಿಸುತ್ತಿರುವ ಅವರು ಇದೇ ಸ್ಥಿತಿಯನ್ನು ಮುಂದುವರಿಸಿಕೊಂಡು ಸಾಗಿದಲ್ಲಿ ಗೆಲುವು ಸುಲಭವಾಗಲಿದೆ.
ನಿನ್ನೆ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿ ವಾಪಸಾಗಿರುವ ಮುನಿರತ್ನ ಇಂದು ಬೆಳಗಿನಿಂದಲೇ ತಮ್ಮ ನಿವಾಸದಿಂದ ಹೊರಗೆ ಬಂದಿಲ್ಲ. ಒಟ್ಟು 24 ಸುತ್ತುಗಳ ಮತ ಎಣಿಕೆ ಆಗ ಬೇಕಿದ್ದು 15 ಸುತ್ತುಗಳ ಎಣಿಕೆ ಮುಕ್ತಾಯದ ನಂತರ ಮತಗಟ್ಟೆಯತ್ತ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತಗಟ್ಟೆ ಸಮೀಪದಲ್ಲಿ ಸಂಭ್ರಮಾಚರಣೆ, ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ. ಈ ಹಿನ್ನೆಲೆ ಸ್ವಲ್ಪ ವಿಳಂಬವಾಗಿಯೇ ಆಗಮಿಸಿ ಕಾರ್ಯಕರ್ತರ ಜೊತೆ ಒಂದಿಷ್ಟು ಸಮಯ ಕಳೆದು ಮತ ಎಣಿಕೆ ಕೇಂದ್ರದ ಒಳಗೆ ಬರುವ ನಿರೀಕ್ಷೆ ಇದೆ.
ಸದ್ಯ ಆರಂಭಿಕ ಸುತ್ತುಗಳ ಎಣಿಕೆ ನಡೆದಿದ್ದು, ಮುನಿರತ್ನ ಮುನ್ನಡೆ ಕಾಪಾಡಿಕೊಂಡಿರುವ ಕಾರಣದಿಂದ ಅವರ ಪ್ರತಿಸ್ಪರ್ಧಿ ಅಭ್ಯರ್ಥಿಗಳು ಯಾರೂ ಇತ್ತ ಮುಖ ಮಾಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಇಂದು ಬೆಳಗ್ಗೆ ತಮ್ಮ ನಿವಾಸದಿಂದ ಹೊರಟು ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದಾದ ಬಳಿಕ ಅವರು ರಾಜರಾಜೇಶ್ವರಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದು, ಇಲ್ಲಿಂದ ನೇರವಾಗಿ ಜ್ಞಾನಾಕ್ಷಿ ವಿದ್ಯಾನಿಕೇತನದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಅಷ್ಟರಲ್ಲೇ ದೊಡ್ಡಮಟ್ಟದ ಹಿನ್ನಡೆ ಎದುರಾದ ಕಾರಣ ಅವರು ಇತ್ತ ಮುಖ ಮಾಡಿಲ್ಲ.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಸ್ಥಿತಿ ಇನ್ನಷ್ಟು ಹೀನಾಯವಾಗಿದ್ದು, ಅವರು ಬೆಳಗ್ಗೆ ಮತಗಟ್ಟೆಯತ್ತ ಆಗಮಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ಇದುವರೆಗೂ ಬಂದಿಲ್ಲ. ಪಕ್ಷೇತರ ಅಭ್ಯರ್ಥಿಗಳು ಬರುವ ಯಾವುದೇ ನಿರೀಕ್ಷೆ ಇಲ್ಲ.