ಬೆಂಗಳೂರು: ನಗರದ ಈಶಾನ್ಯ ವಿಭಾಗದಲ್ಲಿ ರೌಡಿಗಳ ಆರ್ಭಟ ಜೋರಾಗಿದ್ದು, ಅದರಲ್ಲೂ ಯಲಹಂಕ, ದೇವನಹಳ್ಳಿ, ಅಮೃತಹಳ್ಳಿ ಭಾಗದಲ್ಲಿ ರೌಡಿಸಂ ಎಲ್ಲೆ ಮೀರಿದೆ.
ಡಿಸಿಪಿ ಸಿ ಕೆ ಬಾಬ ಈ ಬಗ್ಗೆ ಗಮನಿಸಬೇಕಿದ್ದು, ಇಷ್ಟು ದಿನ ರಸ್ತೆಯಲ್ಲಿ ಇರುತ್ತಿದ್ದ ದುಷ್ಕರ್ಮಿಗಳು ಈಗ ಸೀದಾ ಮನೆಗೆ ನುಗ್ಗಿದ್ದಾರೆ. ಬೆಳಗಿನ ಜಾವ ಗಾಂಜಾ ಎಣ್ಣೆ ಮತ್ತಲ್ಲಿ ಮನೆಗೆ ನುಗ್ಗಿದ ಪುಂಡರ ಗುಂಪು, ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ರಾತ್ರೋರಾತ್ರಿ ಕಾರಿನಲ್ಲಿ ಬಂದು ಮನೆಗೆ ನುಗ್ಗಿ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿಡಿಯೋ ಸಿಕ್ಕಿದ್ದು, ನಗರದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಅಟ್ಟೂರು ಲೇಔಟ್ ಬಳಿ ಘಟನೆ ನಡೆದಿದೆ.
ತಡರಾತ್ರಿ ಮೂರು ಗಂಟೆಯ ಸುಮಾರಿಗೆ ರೌಡಿಗಳು ವರದರಾಜ್ ಎನ್ನುವವರ ಮನೆಗೆ ನುಗ್ಗಿದ್ದಾರೆ. ವರದರಾಜ್ ಅವರಿಗೆ ಸೇರಿದ ಮನೆಯಲ್ಲಿ ಹದಿನೈದು ಕುಟುಂಬ ಬಾಡಿಗೆಗೆಗಿದ್ದು, ಮನೆ ಮಾಲೀಕನನ್ನು ಹುಡುಕಿಕೊಂಡು ಬಂದ ರೌಡಿಗಳು ಬಾಡಿಗೆ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ.
ಕಿಟಕಿಯ ಗ್ಲಾಸ್ ಒಡೆದು, ಮನೆ ಬಾಗಿಲು ಬಡಿದು ಬೆದರಿಕೆ ಹಾಕಿದ್ದು, ದುಷ್ಕರ್ಮಿಗಳ ಆರ್ಭಟಕ್ಕೆ ಬಾಡಿಗೆದಾರರು ಬೆದರಿದ್ದಾರೆ. ಭಯದ ವಾತಾವರಣದಲ್ಲಿ ಈಗ ಜನ ವಾಸ ಮಾಡುತ್ತಿದ್ದು, ಇಷ್ಟಾದರು ಪೊಲೀಸರು ಕ್ರಮ ಕೈಗೊಂಡಿಲ್ಲ. ಎಲ್ಲಾ ಮಾಹಿತಿ ಇದ್ದು ಈಶಾನ್ಯ ವಿಭಾಗದ ಡಿಸಿಪಿ ಕಣ್ಮುಚ್ಚಿ ಕುಳಿತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಹೆಸರು ಮಾತ್ರಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡಿರುವ ಎಂಬ ಮಾಹಿತಿ ಲಭ್ಯವಾಗಿದೆ. ರಾತ್ರಿ ಪುಂಡರ ದಾಂಧಲೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾದ ದೃಶ್ಯಗಳನ್ನು ನೀಡಿದರೂ ಆರೋಪಿಗಳನ್ನು ಖಾಕಿ ಪಡೆ ಬಂಧಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.