ಬೆಂಗಳೂರು : ರೈಸ್‌ಪುಲ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರನ್ನು ನಂಬಿಸಿ ₹50 ಲಕ್ಷಕ್ಕೆ ತಾಮ್ರದ ಚೊಂಬು ಮಾರಾಟ ಮಾಡಲು ಯತ್ನಿಸಿದ ತಮಿಳುನಾಡಿನ ಐವರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈನ ಅರುಳ್ ಕಾಂತ್, ಚಂದ್ರಶೇಖರ್, ಮಸ್ತಾನ್, ದಯಾಳ್, ಡೇನಿಯಲ್ ಮೋಸಸ್ ಬಂಧಿತರು. ಪ್ರಕರಣದ ಕಿಂಗ್‌ಪಿನ್ ಬೆಂಗಳೂರು ಮೂಲದವನಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಜ.21ರಂದು ಸಂಜೆ 4 ಗಂಟೆಗೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯ ಎಎಸ್‌ಐ ಪುಟ್ಟಸ್ವಾಮಿ ಗಸ್ತಿನಲ್ಲಿದ್ದಾಗ ಕತ್ರಿಗುಪ್ಪೆ ಬಿಗ್‌ಬಜಾರ್ ಬಳಿ ಐವರು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಸಿಕ್ಕಿತ್ತು.
ಕೂಡಲೇ ಪುಟ್ಟಸ್ವಾಮಿ ಸಿಬ್ಬಂದಿ ಜತೆ ಬಿಗ್‌ಬಜಾರ್ ಬಳಿ ತೆರಳಿದಾಗ ಐವರು ಬ್ಯಾಗ್ನಲ್ಲಿ ಅನುಮಾನಾಸ್ಪದ ವಸ್ತು ಇಟ್ಟುಕೊಂಡು ತಿರುಗಾಡುತ್ತಿರುವುದು ಕಂಡು ಬಂದಿತ್ತು. ಆರೋಪಿಗಳನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದರು. ಆರೋಪಿ ಅರುಳ್ ಕಾಂತ್ ಕೈಯಲ್ಲಿದ್ದ ಬ್ಯಾಗ್‌ನ ಪೊಲೀಸರು ಪರಿಶೀಲಿಸಿದಾಗ 2 ತಾಮ್ರದ ಚೊಂಬು ಪತ್ತೆಯಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.