ಬೆಂಗಳೂರು: ಸೇವೆಯಿಂದ ವಜಾಗೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರ ಮತ್ತೆ ಮರು ನೇಮಕಗೊಂಡ ನಂತರ ಗಳಿಕೆ ರಜೆ ನಗದೀಕರಣಕ್ಕೂ ಅರ್ಹರು ಎಂದು ಹೈಕೋರ್ಟ್ ಆದೇಶಿಸಿದೆ. ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಸಿಬ್ಬಂದಿಗೆ ಗಳಿಕೆ ರಜೆ ನಗದು ಪಾವತಿಸುವಂತೆ ಸೂಚಿಸಿದೆ.
ಸಿಬ್ಬಂದಿ ಸೇವೆಯಿಂದ ವಜಾಗೊಂಡಿದ್ದ ಅವಧಿಗೆ ಗಳಿಕೆ ರಜೆ ನಗದು ಪಡೆಯುವಂತಿಲ್ಲ ಎಂಬುದಾಗಿ ಕೆಎಸ್‌ಆರ್‌ಟಿಸಿ ಪರ ಮಂಡಿಸಿದ ವಕೀಲರ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ. ಅಲ್ಲದೇ, ಕೆಎಸ್‌ಆರ್‌ಟಿಸಿ ನೀಡುತ್ತಿರುವ ಈ ಕಾರಣವನ್ನು ಒಪ್ಪಲಾಗದು. ಇದು ಕೃತಕವಾದದ್ದು ಎಂದು ಪೀಠ ತಿಳಿಸಿದೆ.
ಜೊತೆಗೆ, ಒಮ್ಮೆ ಉದ್ಯೋಗಿ ಅಥವಾ ನೌಕರ ಗಳಿಕೆ ರಜೆ ಪಡೆಯಲು ಅರ್ಹನಾದರೆ ಆತ ಅದರ ನಗದೀಕರಣಕ್ಕೂ ಸಹಜವಾಗಿಯೇ ಅರ್ಹನಾಗಿರುತ್ತಾನೆ. ಇದು ಅವರ ಖಾತೆಗೆ ಸೇರ್ಪಡೆಗೊಂಡಿರಲಿದೆ. ಹೀಗಾಗಿ, ಇದರ ನಗದೀಕರಣ ಮಾಡಿಕೊಳ್ಳಲು ಅವರಿಗೆ ಅವಕಾಶವಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.
ನರಸಗೌಡ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ಸೇವೆಗೆ ಮರು ನೇಮಕ ಮತ್ತು ಸೇವಾ ಮುಂದುವರಿಕೆ ಎರಡಕ್ಕೂ ವ್ಯತ್ಯಾಸವಿದೆ. ಹಾಗಾಗಿ, ಉದ್ಯೋಗಿ ಗಳಿಕೆ ರಜೆ ನಗದೀಕರಣ ಸೇರಿ ಎಲ್ಲಾ ರೀತಿಯ ಸೇವಾ ಭತ್ಯೆಗಳನ್ನು ಪಡೆಯಲು ಅರ್ಜಿದಾರರು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ : ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರ ವಿವಾಹ ಸಿಂಧುತ್ವ ಪ್ರಶ್ನಿಸುವಂತಿಲ್ಲ: ಹೈಕೋರ್ಟ್
ಪ್ರಕರಣದ ಹಿನ್ನೆಲೆ ಏನು ? : ವಿ.ನಾಗರಾಜ್ 1977 ರಲ್ಲಿ ನಿವಾರ್ಹಕರಾಗಿ ಕೆಎಸ್‌ಆರ್‌ಟಿಸಿ ಸೇರ್ಪಡೆಯಾಗಿದ್ದರು. ಶಿಸ್ತು ಕ್ರಮದ ನಂತರ 1991ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅವರು ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ 1993 ರಿಂದ ಪೂರ್ವಾನ್ವಯವಾಗುವಂತೆ ಎಲ್ಲಾ ಸೇವಾ ಭತ್ಯೆ ಮತ್ತು ಬಾಕಿ ವೇತನ ನೀಡುವಂತೆ ಮತ್ತು ಮರು ನೇಮಕ ಮಾಡಿಕೊಳ್ಳುವಂತೆ ಆದೇಶ ನೀಡಿತ್ತು.
ನಾಗರಾಜ್ 2012 ರ ಜುಲೈನಲ್ಲಿ ಸೇವೆಯಿಂದ ನಿವೃತ್ತರಾದರು. ಹೊಸ ಸುತ್ತೋಲೆಯಂತೆ 300 ರಜೆಗಳ ಬದಲಿಗೆ 246 ಗಳಿಕೆ ರಜೆಗಳಿಗೆ ಮಾತ್ರ ನಗದು ನೀಡಲಾಗಿತ್ತು. ಅವರು ಮತ್ತೆ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿ ಗಳಿಕೆ ರಜೆಯ ನಗದು ಸಂಬಂಧ 1,09,210 ರೂ. ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಜೊತೆಗೆ, ಕೆಎಸ್‌ಆರ್‌ಟಿಸಿ ಶೇ.12ರ ಬಡ್ಡಿಯನ್ನೂ ಪಾವತಿಸುವಂತೆ ಆದೇಶಿಸಿತ್ತು.
ಇದನ್ನೂ ಓದಿ : ಕೆಐಎಎಲ್‌ನಲ್ಲಿ ಸರಕು ನಿರ್ವಹಣೆ ಗುತ್ತಿಗೆ ಅವಧಿ ಪೂರ್ಣ ಬಳಿಕ ಮುಂದುವರೆಸಲಾಗದು: ಹೈಕೋರ್ಟ್
ಇದನ್ನು ಪ್ರಶ್ನಿಸಿದ್ದ ಕೆಎಸ್‌ಆರ್‌ಟಿಸಿ, ಸಿಬ್ಬಂದಿ ನಿಗದಿತ ಅವಧಿಯಲ್ಲಿ ಕಾರ್ಯನಿರ್ವಹಿಸಿಲ್ಲ ಹಾಗೂ ಅವರು ಆ ದಿನಗಳಿಗೆ ರಜೆ ಗಳಿಕೆಗೆ ನಗದು ಪಡೆಯಲು ಅರ್ಹರಲ್ಲ ಎಂದು 2019 ರ ಮಾರ್ಚ್ ಮತ್ತು ಮೇ ತಿಂಗಳಲ್ಲೇ ಹಿಂಬರಹ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ನಾಗರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.