ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸಿದ್ದ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಮುಂಚೂಣಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಮುದ್ದಪ್ಪ (99) ನಿನ್ನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೂಲತಃ ಕೆ.ಆರ್. ನಗರದವರಾದ ಮುದ್ದಪ್ಪ, ಕಾನೂನು ಪದವಿ ಪಡೆದು ನಂತರ ಐಎಎಸ್ ಪಾಸ್ ಆಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಪಾಂಡವಪುರ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮದ ಜನರಲ್ ಮ್ಯಾನೇಜರ್ ಆಗಿದ್ದ ವೇಳೆ ಸಾರಿಗೆ ಸಚಿವರಾಗಿದ್ದ ದಿ. ಡಿ. ದೇವರಾಜ ಅರಸು ಅವರ ಒತ್ತಾಸೆಯಂತೆ ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸಿದರು. ದಿ. ಆರ್.ಗುಂಡೂರಾವ್ ಸಾರಿಗೆ ಸಚಿವರಾಗಿದ್ದಾಗ ಬಿಎಂಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ನೆರವಾಗಿದ್ದರು. ಗ್ರಾಹಕ ಮಹಾ ಮಂಡಲದ ವ್ಯವಸ್ಥಾಪಕ ನಿರ್ದೇಶಕರಾಗಿ ಜನತಾ ಬಜಾರ್ ಪ್ರಾರಂಭಿಸಲು ಕಾರಣಕರ್ತರಾಗಿದ್ದರು
ಕೆಎಂಎಫ್ ಬೆಳವಣಿಗೆಗೆ ಪ್ರಮುಖ ಪಾತ್ರ: ಕರ್ನಾಟಕ ಡೈರಿ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ವಿಶ್ವಬ್ಯಾಂಕ್ ನಿಂದ ಸಾಲ ತಂದು ಇಂದಿನ ಕೆಎಂಎಫ್ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದರು.
ಮೈಸೂರು ಮಹಾನಗರ ಪಾಲಿಕೆಯ ಮೊದಲ ಆಡಳಿತಾಧಿಕಾರಿಯಾಗಿದ್ದರು. ಸಿದ್ದಗಂಗಾ ಮಠ, ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಡಾ. ಎಂ.ಸಿ. ಮೋದಿ ಟ್ರಸ್ಟ್, ನಿಜಲಿಂಗಪ್ಪ ಟ್ರಸ್ಟ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಅನ್ನಪೂರ್ಣ ಟ್ರಸ್ಟ್ ರಾಜ್ಯ ಸೇವಾರತ್ನ ಎಂಬ ಬಿರುದು ನೀಡಿದೆ.
ಸಿದ್ದಗಂಗಾ ಮಠದಿಂದ ಸಮಾಜ ಸೇವಾ ಸಂಪನ್ನ ಹಾಗೂ ಧರ್ಮನಿಷ್ಠ ಕಾಯಕ ಯೋಗಿ ಬಿರುದು ನೀಡಿ ಗೌರವಿಸಲಾಗಿದೆ. ಚಿತ್ರದುರ್ಗದ ಮುರುಘ ಮಠದಿಂದ ಬಸವ ಭೂಷಣ ಹಾಗೂ ಬೆಂಗಳೂರಿನ ಈಶ್ವರಿ ಮಹಾಮಂಡಲದಿಂದ ಈಶ್ವರ ಶ್ರೀ ಬಿರುದು ನೀಡಲಾಗಿದೆ. ಮುದ್ದಪ್ಪ ಅವರು ನಾಲ್ಕು ಗಂಡು ಹಾಗೂ ಒಬ್ಬ ಹೆಣ್ಣು ಮಗಳನ್ನು ಬಿಟ್ಟು ಅಗಲಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಸಂತಾಪ :
ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿಯಾಗಿ ಅನೇಕ ಪ್ರಮುಖ ಇಲಾಖೆಗಳ ಮುಖ್ಯಸ್ಥರಾಗಿ ನಾಡಿನ ಎಲ್ಲ ಮಠಾಧೀಶರಿಗೆ ಆಪ್ತರಾಗಿದ್ದ ಅದರಲ್ಲಿಯೂ ವಿಶೇಷ ವಾಗಿ ಸಿದ್ದಗಂಗಾ ಶಿವಕುಮಾರ ಮಹಾಸ್ವಾಮಿಗಳ ಪರಮ ಭಕ್ತರಾಗಿದ್ದ, ನಮ್ಮಂತಹ ಅಧಿಕಾರಿಗಳಿಗೆ ಆದರ್ಶ ಪ್ರಾಯರಾಗಿ ಮಾರ್ಗದರ್ಶಕರಾಗಿದ್ದ ಬಿ.ಎಸ್. ಮುದ್ದಪ್ಪನವರ ನಿಧನ ಇಡೀ ಸಮಾಜಕ್ಕೆ ಅದ ಬಹು ದೊಡ್ಡ ನಷ್ಟ.
ಅವರೊಬ್ಬ ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದರು.ಕರ್ನಾಟಕ ದಲ್ಲಿ ಕೆ. ಡಿ. ಡಿ. ಸಿ ಸಂಸ್ಥೆಯ ಮೊದಲ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ನಾಟಕ ದಲ್ಲಿ ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ ಮಹಾನ್ ಚೇತನ ಅವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಓದಿ: ಚುನಾವಣೆ ಹಿನ್ನೆಲೆಯಲ್ಲೇ ಪಂಜಾಬ್ ಸಿಎಂ ಸಂಬಂಧಿಗಳ ಮನೆ ಮೇಲೆ ಇ.ಡಿ ದಾಳಿ: 6 ಕೋಟಿ ಜಪ್ತಿ