ಬೆಂಗಳೂರು: ಶಾಂತಿನಗರ ಬಸ್ ಟರ್ಮಿನಲ್ ಎದುರಿನ ರಸ್ತೆಗೆ ಪುನೀತ್ ರಾಜ್ಕುಮಾರ್ ಹಾಗೂ ವಿಲ್ಸನ್ ಗಾರ್ಡನ್ನ 8ನೇ ಅಡ್ಡರಸ್ತೆಗೆ ವಿರಾಟ್ ಕೊಹ್ಲಿ ಹೆಸರು ಇಡಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಿಗೆ ಮತ್ತು ಬಿಬಿಎಂಪಿ ಆಡಳಿತಾಧಿಕಾರಿಗೆ ಪತ್ರ ಬರೆಯಲಾಗಿದೆ.
ಶಾಂತಿನಗರ ಬಸ್ ಟರ್ಮಿನಲ್ ಮುಂಭಾಗದ ರಸ್ತೆಗೆ ಅಪ್ಪು ಹೆಸರಿಡುವಂತೆ ಮತ್ತು ವಿಲ್ಸನ್ ಗಾರ್ಡನ್ 8ನೇ ಕ್ರಾಸ್ ರಸ್ತೆಗೆ ವಿರಾಟ್ ಕೊಹ್ಲಿ ಹೆಸರಿಡುವಂತೆ ಆಗ್ರಹಿಸಿ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಕೊಳ್ಳೇಗಾಲದಲ್ಲಿ ದೊಡ್ಡರಸ್ತೆಗೆ ಪುನೀತ್ ಹೆಸರು - ಚಾಮರಾಜನಗರದಲ್ಲಿ ನಾಮಕರಣ ಮಾಡಲು ಮೂಡದ ಒಮ್ಮತ
ಬೆಂಗಳೂರಿನ ಎರಡು ರಸ್ತೆಗಳಿಗೆ ಇಬ್ಬರು ದಿಗ್ಗಜರ ಹೆಸರು ಇಡುವ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ಚಿಂತನೆ ನಡೆಸುತ್ತಿದೆ. ಪತ್ರದ ಕುರಿತು ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಜೊತೆ ಚರ್ಚೆ ಮಾಡಲು ಮುಂದಾಗಿದ್ದೇವೆ. ವಿಲ್ಸನ್ ಗಾರ್ಡನ್ 8ನೇ ಕ್ರಾಸ್ ಹಾಗೂ ಬಸ್ ನಿಲ್ದಾಣದ ಮುಂಭಾಗದ ರಸ್ತೆಗೆ ಈವರೆಗೆ ಯಾವುದೇ ಅಧಿಕೃತ ಹೆಸರುಗಳಿಲ್ಲ. ಹೀಗಾಗಿ, ರಸ್ತೆಗಳಿಗೆ ಈ ಎರಡು ಹೆಸರು ನಾಮಕರಣ ಮಾಡುವಂತೆ ಸಭೆಯ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.