ಬೆಂಗಳೂರು : ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ನಿಯಮ 69ರ ಗಮನ ಸೆಳೆಯುವ ಸೂಚನೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಕೆಳಗೆ ಹಣ್ಣು, ತರಕಾರಿ, ಹೂವೂ ಬರಬೇಕು. ಯಾವುದೇ ಬೆಳೆಗಳನ್ನು ಬೆಳೆಯಲಿ ಅದು ಎಂಎಸ್ಪಿ ಯೋಜನೆಯಡಿ ಬರಬೇಕು.
ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಮನವಿ ಮಾಡಿ. ರಾಜ್ಯದ 25 ಬಿಜೆಪಿ ಎಂಪಿಗಳಿದ್ದು, ಈ ಸಂಬಂಧ ಕೇಂದ್ರಕ್ಕೆ ಮನವಿ ಮಾಡಬೇಕು. ಕಟಾವು ಮುನ್ನ ಎಂಎಸ್ಪಿ ಪ್ರಕ್ರಿಯೆ ಶುರು ಮಾಡಬೇಕು. ಮಧ್ಯವರ್ತಿ ಬರುವ ಮುನ್ನ ಈ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದರು.
ಕೇರಳ ಮತ್ತು ಪಂಜಾಬ್ನಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಕಾನೂನು ತಂದಿದ್ದಾರೆ. ಅಂತಹ ಕಾನೂನನ್ನು ರಾಜ್ಯದಲ್ಲೂ ತರಬೇಕು ಎಂದು ಇದೇ ವೇಳೆ ಆಹ್ರಹಿಸಿದರು.
ರೈತರನ್ನು ದಾರಿ ತಪ್ಪಿಸಲು ಅಸಾಧ್ಯ: ಯಾರಿಂದಲೂ ರೈತರ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅವರು ಬುದ್ಧಿವಂತರು. ಅವರ ದಾರಿ ತಪ್ಪಿಸ್ತಾ ಇದ್ದೀರಾ ಎಂದು ಹೇಳಿದ್ರೆ, ಅದು ಮೂರ್ಖತನ ಎಂದರು. ಇದಕ್ಕೂ ಮುನ್ನ ಸಚಿವ ಮಾಧುಸ್ವಾಮಿ 2013ರಲ್ಲಿ ಎಪಿಎಂಸಿ ಸಂಬಂಧ ಸಿದ್ದರಾಮಯ್ಯ ಬರೆದ ಪತ್ರವನ್ನು ಓದಿದರು. 2013ರಲ್ಲಿ ಸಹಕಾರ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ಹಣ್ಣು, ಹೂ, ತರಕಾರಿಗಳನ್ನು ಎಪಿಎಂಸಿಯಿಂದ ಹೊರಗೆ ಮಾರಲು ಅವಕಾಶ ನೀಡುವಂತೆ ಸೂಚಿಸಿದ್ದೀರಾ ಎಂದು ಹೇಳಿದರು.
ಇದನ್ನೂ ಓದಿ.. ಗುರುವಾರದಂದು ಚಳಿಗಾಲದ ಅಧಿವೇಶನ ಅಂತ್ಯಗೊಳಿಸಲು ಕಲಾಪ ಸಲಹಾ ಸಮಿತಿ ತೀರ್ಮಾನ
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಲ್ಲ ನಾನು ಪೆರಿಷಿಯೇಬಲ್ ಗೂಡ್ಸ್ ಅನ್ನು ಮಾತ್ರ ಸೀಮಿತವಾಗಿ ಆ ಪತ್ರದಲ್ಲಿ ಬರೆದಿದ್ದೇನೆ. ಹಣ್ಣು ಮತ್ತು ತರಕಾರಿಯನ್ನು ಎಪಿಎಂಸಿಯಿಂದ ಹೊರಗಿಡುವಂತೆ ಮಾತ್ರ ಹೇಳಿದ್ದೇನೆ ಅಷ್ಟೇ.. ಇದಕ್ಕೆ ನಾನೂ ಈಗಲೂ ಬದ್ಧನಾಗಿದ್ದೇನೆ ಎಂದು ಸಮರ್ಥಿಸಿಕೊಂಡರು.
ಈ ವೇಳೆ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ನೀವು ಇಲ್ಲಿ ದ್ವಂದ್ವ ನೀತಿ ಅನುಸರಿಸ ಬೇಡಿ. ನೀವು ರೈತರಿಗೆ ಮೋಸ ಮಾಡಿದ್ದೀರಾ ಎಂದು ಒಪ್ಪಿಕೊಳ್ಳಿ. ನೀವು ರಾಜಕೀಯ ಉದ್ದೇಶಕ್ಕೆ ರೈತರ ದಾರಿ ತಪ್ಪಿಸುತ್ತಿದ್ದೀರಾ ಎಂದು ಆರೋಪಿಸಿದರು.
2007-08ರಿಂದ ಖಾಸಗಿಯವರಿಗೆ ಅವಕಾಶ ನೀಡಲಾಗಿದೆ. 40ಕ್ಕೂ ಹೆಚ್ಚು ಖಾಸಗಿ ಮಾರುಕಟ್ಟೆಗಳು ರಾಜ್ಯದಲ್ಲಿ ಅಸ್ತಿತ್ವದಲ್ಲಿವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ರೈತರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಹಾಗೆ ಮಾಡುತ್ತೇವೆ ಅಂದರೆ ಅದು ಭ್ರಮೆ ಎಂದು ತಿರುಗೇಟು ನೀಡಿದರು.