ಬೆಂಗಳೂರು: ವಿದ್ಯುತ್ ಶುಲ್ಕ ಏರಿಕೆ ಬೆನ್ನಲ್ಲೇ ನೀರಿನ ಶುಲ್ಕವೂ ಏರಿಕೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ನೀರಿನ ದರ ಶೇ. 25 ರಷ್ಟು ಹೆಚ್ಚಿಸುವಂತೆ ಜಲಮಂಡಳಿ ಕಳೆದ ಫೆಬ್ರವರಿಯಲ್ಲಿ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿತ್ತು. ಸರ್ಕಾರ ಒಪ್ಪಿಗೆ ಸೂಚಿಸಿದರೆ ನೀರಿನ ದರವೂ ಶೇ. 25 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕೊರೊನಾ ನಡುವೆ ಜನರಿಗೆ ಕರೆಂಟ್ ಶಾಕ್ ನೀಡಿದ ರಾಜ್ಯ ಸರ್ಕಾರ!
ಈ ಬಗ್ಗೆ ಈಟಿವಿ ಭಾರತ್ ಗೆ ಮಾಹಿತಿ ನೀಡಿದ ಜಲಮಂಡಳಿ ಅಧ್ಯಕ್ಷರಾದ ಜಯರಾಮ್, ಸರ್ಕಾರಕ್ಕೆ ಈ ಮೊದಲೇ ಪ್ರಸ್ತಾವನೆ ನೀಡಿದ್ದೆವು. ಜಲಮಂಡಳಿಯ ನಿರ್ವಹಣೆಗೆ ಎಷ್ಟು ವೆಚ್ಚವಾಗುತ್ತಿದೆ ಅದನ್ನು ವಾಪಾಸು ಸಂಗ್ರಹಿಸಲು ಸಾಧ್ಯವಾಗುವಷ್ಟು ಶುಲ್ಕ ನಿಗದಿ ಮಾಡಲು ಪ್ರಸ್ತಾವನೆ ಮಾಡಿದ್ದೇವೆ ಎಂದರು.
ಬೆಸ್ಕಾಂ ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಜಲಮಂಡಳಿಗೆ ಮಾಸಿಕ 5 ರಿಂದ 6 ಕೋಟಿ ಹೆಚ್ಚುವರಿ ಹೊರೆಯಾಗ್ತದೆ. ಕಳೆದ ಆರು ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡದ ಹಿನ್ನಲೆ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದು, ನೀರಿನ ಬಿಲ್ ಏರಿಕೆ ಮಾಡುವ ಸಾಧ್ಯತೆ ಇದೆ.
ಜಲಮಂಡಳಿಗೆ ಪ್ರತಿ ತಿಂಗಳು ನೀರಿನ ಶುಲ್ಕದ ರೂಪದಲ್ಲಿ 110 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇದರಲ್ಲಿ ಶೇ.50 ರಷ್ಟು ವಿದ್ಯುತ್ ಶುಲ್ಕ ಹಾಗೂ ಶೇ.30 ರಷ್ಟು ನಿರ್ವಹಣೆಗೆ ವೆಚ್ಚವಾಗ್ತಿದೆ. ಇದಲ್ಲದೆ ಜಲಮಂಡಳಿ ಕೈಗೊಂಡಿರುವ ಅನೇಕ ಯೋಜನೆಗಳಿಗೆ ವೆಚ್ಚಮಾಡುವ ಅಗತ್ಯ ಇರುವುದರಿಂದ ನೀರಿನ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಇದೆ.
ಕಳೆದ ಜನವರಿಯಲ್ಲಿ ಜಲಮಂಡಳಿ ಶೇ.35 ರಷ್ಟು ನೀರಿನ ಶುಲ್ಕ ಹೆಚ್ಚಳದ ಪ್ರಸ್ತಾವನೆ ನೀಡಿತ್ತು. ಆದರೆ, ಇದು ದುಬಾರಿಯಾದ್ದರಿಂದ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಹೇಳಿದ ಬಳಿಕ ಶೇ.25 ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆ ಸಲ್ಲಿಸಿತ್ತು.