ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಹಗಲು ಕನಸು ಕಾಣೋಕೆ ಹೋಗಬೇಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ವೈಯಕ್ತಿಕ. ಯತ್ನಾಳ್ ಯಾರನ್ನು ವೈಭವೀಕರಿಸ್ತಾರೆ, ಯಾರನ್ನು ಟೀಕಿಸ್ತಾರೆ ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯತ್ನಾಳ್ ಬಗ್ಗೆ ಅಪಾರವಾದ ಗೌರವ ಇದೆ. ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾಯಕತ್ವ ಗುಣ ಇದೆ, ಸಾಮರ್ಥ್ಯ ಇದೆ. ಹಲವು ಸಂದರ್ಭದಲ್ಲಿ ನಾನೇ ಯತ್ನಾಳ್ ಅವರನ್ನು ಹಿಂದು ಹುಲಿ ಅಂತಾ ಕರೆದಿದ್ದೇನೆ. ಆದ್ರೆ ಯತ್ನಾಳ್ ಅವರೇ ಸ್ವಯಂ ಘೋಷಿತ ನಾಯಕರಾಗೋಕೆ ಹೋಗಬೇಡಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಅಧ್ಯಕ್ಷರು, ಪ್ರಧಾನಿಗಳು, ವರಿಷ್ಠರೆಲ್ಲರೂ ನಾಯಕತ್ವದ ಬದಲಾವಣೆ ಇಲ್ಲ ಅಂತಾ ಹೇಳಿದ್ದಾರೆ. ಸಿಎಂ ಬದಲಾಗುತ್ತಾರೆ ಅಂತಾ ಪ್ರಧಾನಿ ನಿಮಗೆ ಕರೆ ಮಾಡಿ ಹೇಳಿದ್ರಾ?. ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ನೀವು ಯಡಿಯೂರಪ್ಪ ಅವರನ್ನು ಟೀಕಿಸಿದರೆ ಮುಖ್ಯಮಂತ್ರಿಗಳಾಗಲ್ಲ. ಬಿಎಸ್‌ವೈ ಟೀಕಿಸಿದ್ರೆ ಮುಖ್ಯಮಂತ್ರಿ ಆಗ್ತೀನಿ ಅಂತಾ ಭ್ರಮಾ ಲೋಕದಲ್ಲಿದ್ದೀರಾ ಎಂದು ಕಿಡಿಕಾರಿದರು.
ಬಿಎಸ್‌ವೈ ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ: ಬಸನಗೌಡ ಪಾಟೀಲ ಯತ್ನಾಳ್
ಮೈತ್ರಿ ಸರ್ಕಾರ ಇದ್ದಾಗ ಬಿಎಸ್‌ವೈ ನೇತೃತ್ವದ ಸರ್ಕಾರ ಬರಬೇಕು ಅಂತಾ ಹೇಳ್ತಿದ್ರಿ. ಸರ್ಕಾರ ಬಂದಾಗ ಆರಂಭದಲ್ಲಿ ಯಡಿಯೂರಪ್ಪರನ್ನು ಹೊಗಳುತ್ತಿದ್ರಿ. ಆದ್ರೆ ಇದೀಗ ನಿಮ್ಮನ್ನು ಮಂತ್ರಿ ಮಾಡಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದೀರಾ?. ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್ ಬಗ್ಗೆ ಏನು ಮಾತನಾಡಿದ್ರಿ ಗೊತ್ತಿದೆ. ಉತ್ತರ ಕರ್ನಾಟಕ ಭಾಗದ ಶಾಸಕ ಭಾಗವಾಗಿ ಮಾತನಾಡಿ ಎಂದು ನಿಮಗೆ ಯಾರಾದರೂ ಪವರ್ ಆಫ್ ಅಟಾರ್ನಿ ಹಾಕಿಕೊಟ್ಟಿದ್ದಾರಾ?. ಏನಾದ್ರೂ ಸಮಸ್ಯೆ ಇದ್ರೆ ಅನುದಾನದ ವಿಚಾರವಾಗಿ ಸಿಎಂ ಜೊತೆ ಮಾತನಾಡಿ. ಅದನ್ನು ಬಿಟ್ಟು ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.