ಬೆಂಗಳೂರು: ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದ್ರು. ಸಿದ್ದರಾಮಯ್ಯನವರ ಮೇಲಿನ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ. ಆದರೆ ಅಧಿಕಾರಕ್ಕೆ ಬಂದೇ ಬರುತ್ತೇವೆಂದು ಕಾಂಗ್ರೆಸ್ ಮುಖಂಡರು ಭ್ರಮೆಯಲ್ಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ನನಗೆ ನಿಜವಾಗಿಯೂ ಗೌರವ ಇದೆ. ನಾನು ಟೀಕೆ ಮಾಡಲ್ಲ. ಅವರ ಮೇಲಿಟ್ಟಿರುವ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ. ಅವು ಕಾಂಗ್ರೆಸ್ ಮತಗಳಲ್ಲ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸತ್ತು ಹೋಗಿದೆ ಎಂದು ಟೀಕಿಸಿದರು.
ಬಿಜೆಪಿ ಸಂಘಟನೆ ದೇಶ, ರಾಜ್ಯದಲ್ಲಿ ಬಲಿಷ್ಠವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನೇಕಾರ ಸಮುದಾಯದ ಮಕ್ಕಳಿಗೆ ವಿದ್ಯಾನಿಧಿ ಕಾರ್ಯಕ್ರಮವನ್ನು ಸಿಎಂ ಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವಕರಿಗೆ ಆದ್ಯತೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ನಾವು ಒಟ್ಟಾಗಿ ಮುನ್ನುಗ್ಗಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನರ ಮನೆ ಬಾಗಿಲಿಗೆ ಯೋಜನೆ ತಲುಪಿಸಿ ಮತ್ತೆ ನಾವು ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: 'ಬಿಬಿಎಂಪಿ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಇಲ್ಲ, ಬಿಜೆಪಿಯ ಮತ್ತೊಂದು ಹೆಸರೇ ಮೋಸ'
ರಾಹುಲ್ ಗಾಂಧಿಯವರು ಬಲವಂತವಾಗಿ ಅಪ್ಪಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ಅವರಿಗೆ ಸೂಚಿಸಿದ್ರು. ನನಗೆ ನಗು ಬರುತ್ತದೆ, ಒಂದು ಕಡೆ ಆಶ್ಚರ್ಯ ಆಗುತ್ತದೆ. ದೇವಸ್ಥಾನದಲ್ಲಿ ತೀರ್ಥವನ್ನು ಮಾತ್ರೆಯಂತೆ ತೆಗೆದುಕೊಳ್ಳುತ್ತಾರೆ. ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಮೋದಿ ಮುಂದೆ ರಾಹುಲ್ ಗಾಂಧಿ ಝೀರೋ ಎಂದು ರಾಹುಲ್ ಗಾಂಧಿ ಕುರಿತು ಟೀಕಿಸಿದರು.