ಬೆಂಗಳೂರು: ವಿಧಾನಸಭೆಯಲ್ಲಿ ನಮ್ಮ ಬಲಾಬಲ ಏನು ಎಂಬುದನ್ನು ತೋರಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯರ ಟ್ವೀಟ್ಗೆ ಮಾಜಿ ಸಚಿವ, ಶಾಸಲ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಯಡಿಯೂರಪ್ಪ ನಿವಾಸದ ಬಳಿ ಮಾತನಾಡಿದ ಅವರು, ಬಲಾಬಲ ಅಧಿವೇಶನ ಪ್ರಾರಂಭ ಆದಾಗ ಗೊತ್ತಾಗುತ್ತದೆ. ತಾಕತ್ತು ತೋರಿಸೋದು ಸದನದ ಹೊರಗೆ ಅಲ್ಲ, ಸದನ ಒಳಗೆ ಎಂದು ಗುಡುಗಿದರು.
ಇನ್ನು ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಅಡ್ರೆಸ್ ಎಲ್ಲಿದೆ ಅಂತಾ ಜನ ತೋರಿಸಿದ್ದಾರೆ. ಯಡಿಯೂರಪ್ಪರ ಶಕ್ತಿ ಏನು ಅಂತಾ ರಾಜ್ಯಕ್ಕೆ ಗೊತ್ತಿದೆ. ಯಡಿಯೂರಪ್ಪ ಹೊರಟರೆ ಯಾವ ಬಿರುಗಾಳಿಯೂ ತಡೆಯಲು ಸಾಧ್ಯವಿಲ್ಲವೆಂದು ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ಹಿಂದೆ ಕುಮಾರಸ್ವಾಮಿ, ದೇವೇಗೌಡರು ಸಿದ್ದರಾಮಯ್ಯ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದರು. ರಾಜಕೀಯದಲ್ಲಿ ಮರೆಯಾಗುವ ಹತಾಶೆಯಿಂದ ಸಿದ್ಧರಾಮಯ್ಯ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಈಗ ನಿರುದ್ಯೋಗಿ. ಮಾಡಲು ಏನೂ ಕೆಲಸವಿಲ್ಲ. ಹಾಗಾಗಿಯೇ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ವಾಸ್ತವದಲ್ಲಿ ಮೈತ್ರಿ ಸರ್ಕಾರ ಪತನವಾಗಬೇಕು ಎಂದು ಬಯಸುತ್ತಿರುವುದೇ ಸಿದ್ದರಾಮಯ್ಯ ಎಂದು ರೇಣುಕಾಚಾರ್ಯ ಆರೋಪಿಸಿದರು.
ನಿಮ್ಮ ಶಾಸಕರಿಗೇ ನಿಮ್ಮ ಬಗ್ಗೆ ವಿಶ್ವಾಸ ಇಲ್ಲ. ರೋಷನ್ ಬೇಗ್, ರಾಮಲಿಂಗಾರೆಡ್ಡಿ ನಿಮ್ಮ ಬಗ್ಗೆ ಏನು ಮಾತಾಡಿದ್ದಾರೆ ಅಂತಾ ಗೊತ್ತಿದೆ. ಅಧಿವೇಶನದಲ್ಲಿ ಬಲ ಪ್ರದರ್ಶಿಸುತ್ತೇವೆ ಅಂತಾ ನಾವು ಎಲ್ಲೂ ಹೇಳಿರಲಿಲ್ಲ. ಬಿಜೆಪಿಯವರು ಸರ್ಕಾರ ಬೀಳಿಸಲಿ ಅಂತಾ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ನಾವು ಯಾವುದೇ ರೀತಿಯಲ್ಲೂ ಆಪರೇಷನ್ ಕಮಲ ಮಾಡುತ್ತಿಲ್ಲ. ಮೈತ್ರಿ ಸರ್ಕಾರ ತಾನಾಗಿಯೇ ಪತನವಾಗಲಿ ಎಂದು ಕಾಯುತ್ತಿದ್ದೇವೆ ಅಷ್ಟೇ ಎಂದು ಹೊನ್ನಾಳಿ ಶಾಸಕ ಸ್ಪಷ್ಟಪಡಿಸಿದರು.