ಬೆಂಗಳೂರು: ಮತಾಂತರಕ್ಕೆ ನಾವು ಒತ್ತಾಯ ಮಾಡುವುದಿಲ್ಲ, ಮತಾಂತರ ನಿಷೇಧ ಮಸೂದೆ ತರುವ ಅಗತ್ಯವೂ ಇಲ್ಲ ಎಂದು ಆರ್ಚ್ಬಿಷಪ್ ಡಾ.ಪೀಟರ್ ಮಚಾಡೊ ಹೇಳಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಲವಂತದ ಮತಾಂತರ ವಿಷಯ ಸುಳ್ಳು, ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದಿಲ್ಲ. ಪ್ರತಿಯೊಬ್ಬ ಧರ್ಮಾಧ್ಯಕ್ಷರ ಹೆಸರಲ್ಲಿ ನೂರಾರು ಶಾಲಾ, ಕಾಲೇಜು, ಆಸ್ಪತ್ರೆಗಳಿವೆ. ಒಂದು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಒಬ್ಬರಿಗೂ ಮತಾಂತರ ಮಾಡಲು ನಾವು ಹೇಳಿಲ್ಲ. ಅಪ್ಪಿತಪ್ಪಿ ಸಣ್ಣ ಘಟನೆಯಾಗಿದ್ದು, ದೊಡ್ಡ ವಿಷಯ ಮಾಡೋದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮತಾಂತರ ಕಡಿವಾಣಕ್ಕೆ ಮಸೂದೆ ತರುತ್ತೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಯಾರೋ ಮಸಿ ಬಳಿಯುವ ಪ್ರಯತ್ನ ಮಾಡ್ತಾ ಇದ್ದಾರೆ. ಸದನದಲ್ಲಿ ಚರ್ಚೆಯಾಗ್ತಿದೆ ಮಾಡಲಿ. ಹೀಗೆ ಮತಾಂತರ ಮಾಡೋದು ಸರಿಯಲ್ಲ ಅಂತಾ ನಾವೇ ಜನರಿಗೆ ಹೇಳಿದ್ದೇವೆ. ಯಾರೋ ಬಂದು ಶಿಲುಬೆ, ಪುಸ್ತಕ ಕೊಟ್ಟು ಮತಾಂತರ ಮಾಡ್ತಾರೆ ಅಂದ್ರೆ ಸರಿಯಲ್ಲ. ನಮಗೂ ನೈತಿಕ ಅಂತರಂಗವಿದೆ. ಜನರಿಗೆ ಫೋರ್ಸ್ ಮಾಡಲ್ಲ. ಮಸೂದೆ ಬಗ್ಗೆ ನನಗೆ ಗೊತ್ತಿಲ್ಲ. ಮಸೂದೆ ಅವಶ್ಯಕತೆ ಇಲ್ಲ ಎಂದರು.
ನಾವೆಲ್ಲರೂ ಕ್ರೈಸ್ತ ಧರ್ಮದಿಂದ ರಾಜ್ಯದ ಧರ್ಮಾಧ್ಯಕ್ಷರು ಬಂದಿದ್ದೇವೆ. ಇವತ್ತು ಸಭೆ ಇತ್ತು. ಸಿಎಂಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇವೆ. ಸಿಎಂ ಆಹ್ವಾನ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸಿಎಂಗೆ ಸಹಕಾರ ನೀಡುವುದಾಗಿ ಹೇಳಿದ್ದೇವೆ. ಶಿಕ್ಷಣ, ವೈದ್ಯಕೀಯ ಸಹಕಾರ ಕೊಡುವುದಾಗಿ ಹೇಳಿದ್ದೇವೆ. ಕೊರೊನಾ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇವೆ. ಅನೇಕರಿಗೆ ಆಹಾರ ನೀಡಿ ಸಹಾಯ ಮಾಡಿದ್ದೇವೆ ಎಂದು ಆರ್ಚ್ಬಿಷಪ್ ತಿಳಿಸಿದರು.
ಸಿಎಂ ಬಳಿ ಮತಾಂತರ ವಿಷಯ ಪ್ರಸ್ತಾಪ:
ಸಿಎಂ ಭೇಟಿ ವೇಳೆ ಮತಾಂತರ ಸಂಬಂಧ ಆರ್ಚ್ಬಿಷಪ್ ವಿಷಯ ಪ್ರಸ್ತಾಪಿಸಿದ್ದಾರೆ. ನಾವು ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವುದೂ ಇಲ್ಲ, ನಾವು ಅಂತವರಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಈಗ ಕೇಳಿಬರುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಎಲ್ಲಾ ಧರ್ಮ-ಜಾತಿಗಳ ಸಾವಿರಾರು ಮಕ್ಕಳು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದುತ್ತಿದ್ದಾರೆ. ಯಾವ ಮಕ್ಕಳು ಕೂಡ ಮತಾಂತರ ಆಗಿಲ್ಲ ಎಂದು ಅವರು ವಿವರಿಸಿದರು.
ಇದನ್ನೂ ಓದಿ:'ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ..': ಅಧಿವೇಶನದಲ್ಲಿ ನೋವು ತೋಡಿಕೊಂಡ ಗೂಳಿಹಟ್ಟಿ ಶೇಖರ್