ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ರಚನೆಯಾದ ತಾಲೂಕುಗಳ ಕಾರ್ಯಾರಂಭಕ್ಕೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕೊಡಗು ಜಿಲ್ಲೆಯಲ್ಲಿ ನೂತನವಾಗಿ ರಚನೆಯಾಗಿರುವ ಕುಶಾಲನಗರ ತಾಲೂಕಿಗೆ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇತರ 54 ಹೊಸ ತಾಲೂಕುಗಳಿಗೆ ಆಡಳಿತಾತ್ಮಕ ಮತ್ತು ಇತರ ಖರ್ಚುಗಳನ್ನು ಭರಿಸಲು ಪ್ರತಿ ತಾಲೂಕಿಗೆ 2.50 ಲಕ್ಷ ರೂ.ನಂತೆ ಒಟ್ಟಾರೆ 1.35 ಕೋಟಿ ರೂ. ಅನುದಾನವನ್ನು ಸಂಬಂಧಿತ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
2017-18, 2018-19 ಮತ್ತು 2019-20ನೇ ಸಾಲಿನಲ್ಲಿ 50 ಹೊಸ ತಾಲೂಕುಗಳ ಕಾರ್ಯಾರಂಭ ಮತ್ತು ಆಡಳಿತಾತ್ಮಕ ಪ್ರಕ್ರಿಯೆ ಪ್ರಾರಂಭಿಸಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ಪ್ರತಿ ತಾಲೂಕಿಗೆ 25 ಲಕ್ಷ ರೂ.ನಂತೆ ಬಿಡುಗಡೆಯಾದ ಒಟ್ಟು 12.50 ಕೋಟಿ ರೂ. ವೆಚ್ಚವಾಗಿರುವ ಬಗ್ಗೆ ಹಾಗೂ 2020-21ನೇ ಸಾಲಿನಲ್ಲಿ 52 ಹೊಸ ತಾಲೂಕುಗಳಿಗೆ ತಲಾ 2.50 ಲಕ್ಷ ರೂ.ನಂತೆ ಬಿಡುಗಡೆಯಾಗಿರುವ ಒಟ್ಟು 1.35 ಕೋಟಿ ರೂ.ನಲ್ಲಿ ಶೇ.75ರಷ್ಟು ಮೊತ್ತ ವೆಚ್ಚವಾಗಿರುವುದಕ್ಕೆ ಬಳಕೆ ಪ್ರಮಾಣ ಪತ್ರ ನೀಡಲು ಸೂಚನೆ ನೀಡಲಾಗಿದೆ.
2017-18ರ ಆಯವ್ಯಯದಲ್ಲಿ ಹೊಸ ತಾಲೂಕು ರಚಿಸುವ ಬಗ್ಗೆ ಘೋಷಿಸಲಾಗಿತ್ತು. ಅದರಂತೆ ಜನವರಿ 2018ರಿಂದ ಅನ್ವಯವಾಗುವಂತೆ ಹೊಸ ತಾಲೂಕುಗಳನ್ನ ರಚಿಸಲು ಹಾಗೂ ತಾಲೂಕು ಕಚೇರಿ ತೆರೆಯಲು ತಾತ್ವಿಕ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿತ್ತು.