ದೇವನಹಳ್ಳಿ: ಕೊಳವೆ ಬಾವಿಯಿಂದ ಕೃಷಿಯೇತರ(ವಾಣಿಜ್ಯ) ಚಟುವಟಿಕೆಗಳಿಗಾಗಿ ಟ್ಯಾಂಕರ್ ಮೂಲಕ ನೀರನ್ನು ಬಳಸುವವರು ಕಡ್ಡಾಯವಾಗಿ ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಂಡು, ನಿರಾಕ್ಷೇಪಣಾ ಪತ್ರವನ್ನು ಪಡೆಯುಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 'ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಸಭೆ'ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂತರ್ಜಲ ಪ್ರಾಧಿಕಾರದಿಂದ ನೋಂದಣಿ ಮಾಡಿಸದೆ, ನಿರಾಕ್ಷೇಪಣಾ ಪತ್ರ ಪಡೆಯದೇ ಅಂತರ್ಜಲ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾದ್ಯಂತ ಸಫಲ ಮತ್ತು ವಿಫಲ ಕೊಳವೆ ಬಾವಿಗಳ ತ್ರೈಮಾಸಿಕ (ಜನವರಿ 2020 -ಮಾರ್ಚ್ 2021ರ ಅಂತ್ಯಕ್ಕೆ) ವರದಿ ನೀಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಲು ಇಚ್ಛಿಸುವ ಅರ್ಜಿದಾರರ ಜಮೀನಿನಿಂದ 250 ರಿಂದ 500 ಮೀಟರ್ ಅಂತರದಲ್ಲಿ ಯಾವುದೇ ಸರ್ಕಾರಿ ಕುಡಿಯುವ ನೀರಿನ ಕೊಳವೆ ಬಾವಿ ಇಲ್ಲದಿರುವ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಹೇಳಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (MSME)ದವರು ಹೊರತುಪಡಿಸಿ, ಉಳಿದ ಎಲ್ಲ ಕೈಗಾರಿಕೆಗಳು ಅಂತರ್ಜಲ ಬಳಸಿದ್ದಲ್ಲಿ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (NGT) ನಿರ್ದೇಶನದಂತೆ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಕಿಲೋ ಲೀಟರ್ ಪರ್ ಡೇ(KLD) ನೀರನ್ನು ಬಳಕೆ ಮಾಡುತ್ತಿರುವ ಕೈಗಾರಿಕೆಗಳಿಗೆ ನಿರಾಕ್ಷೇಪಣಾ ಪತ್ರವನ್ನು ನೀಡುವ ಸಂದರ್ಭದಲ್ಲಿ ದುಃಸ್ಥಿತಿಯಲ್ಲಿರುವ ಕೆರೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವಂತೆ ತಿಳಿಸಿ ಎಂದರಲ್ಲದೆ, ಸರ್ಕಾರಿ ಹಾಸ್ಟೆಲ್ ಮತ್ತು ಶಾಲೆಗಳಲ್ಲಿ ಶೌಚಾಲಯಗಳ ದುರಸ್ಥಿ, ಸೋಲಾರ್ ಅಳವಡಿಸಿಕೊಡಲು ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ತಿಳಿಸಿ ನಿರಾಕ್ಷೇಪಣಾ ಪತ್ರ ನೀಡಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಹಿರಿಯ ಭೂ ವಿಜ್ಞಾನಿ ಪಲ್ಲವಿ, ಭೂ ವಿಜ್ಞಾನಿ ವೆಂಕಟೇಶ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಭೀಮ್ ಸಿಂಗ್ ಗೋಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.