ಬೆಂಗಳೂರು: ನಗರದ ಹಲವು ಕಡೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ರೆಡ್ ಲೈಟ್ ರೆಡ್ ಹಾರ್ಟ್ ಆಗಿ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆಯನ್ನು ಹೃದಯಾಘಾತ ಸೇರಿದಂತೆ ಅನೇಕ ಹೃದಯದ ಸಮಸ್ಯೆಗಳು ಬಾಧಿಸುತ್ತಿರುವುದರಿಂದ ವಿನೂತನವಾಗಿ ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಮಣಿಪಾಲ್ ಆಸ್ಪತ್ರೆಯ ಅಭಿಯಾನಕ್ಕೆ ಪೊಲೀಲ್ ಇಲಾಖೆ ಕೈಜೋಡಿಸಿದೆ.
ಮಹಾತ್ಮಾ ಗಾಂಧಿ ಸರ್ಕಲ್, ಮಿನ್ಸ್ಕ್ ಸ್ಕ್ವೇರ್, ಸೇರಿದಂತೆ ನಗರದ ಹಲವೆಡೆ ರಸ್ತೆ ಸಿಗ್ನಲ್ ದೀಪಗಳಲ್ಲಿ ಕೆಂಪು ಸಿಗ್ನಲ್ ಬದಲು ಕೆಂಪು ಹೃದಯದ ಚಿಹ್ನೆ ಅಳವಡಿಸಲಾಗಿದ್ದು, ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ ಆರ್ ರವಿಕಾಂತೇ ಗೌಡ ತಿಳಿಸಿದ್ದಾರೆ.
ವಿಶ್ವ ಹೃದಯ ಆರೋಗ್ಯ ದಿನಾಚರಣೆ ಹಿನ್ನೆಲೆ ಮಣಿಪಾಲ್ ಆಸ್ಪತ್ರೆಯವರು ಯುವಕರಲ್ಲಿ ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯ ಸಹಕಾರ ಕೇಳಿದ್ದು, ನಾವು ಅವರ ಜೊತೆ ಕೈಜೋಡಿಸಿದ್ದೇವೆ. ಮೂರು ರೀತಿ ಅರಿವು ಮೂಡಿಸುವಂತಹ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಮೊದಲನೆಯದಾಗಿ ನಿಗದಿತ ಜಂಕ್ಷನ್ಗಳಲ್ಲಿರುವ ರೆಡ್ ಸಿಗ್ನಲ್ಗಳನ್ನು ಹಾರ್ಟ್ ಶೇಪ್ನಲ್ಲಿ ಮಾರ್ಪಾಡು ಮಾಡಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಬಣ್ಣದ ಜೊತೆ, 'ಕೆಂಪು ಬಂದಾಗ ನಿಲ್ಲಿ ಇದು ಹೃದಯದ ಸಂದೇಶ' ಎಂಬ ಅನೌನ್ಸ್ಮೆಂಟ್ ಕೂಡ ಆಗುತ್ತದೆ.
ಎರಡನೆಯದು ನಮ್ಮ ಕಿಯೋಸ್ಕ್ ಮೇಲೆ ಇದೇ 25ರ ತನಕ ತಾತ್ಕಾಲಿಕವಾಗಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಸಂದೇಶ ಹಾಗೂ ಅನೌನ್ಸ್ಮೆಂಟ್ ಮಾಡುತ್ತಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅವರ ಜೊತೆ ಪೊಲೀಸರು ಕೂಡ ಸಾಮಾಜಿಕ ಜವಾಬ್ದಾರಿ ಎಂದು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಪಂಪ್ಕಿನ್ ಹಲ್ವಾ ಹೃದಯದ ಆರೋಗ್ಯ ಉತ್ತೇಜಿಸುತ್ತೆ... ಇಲ್ಲಿದೆ ಮಾಡುವ ಸುಲಭ ವಿಧಾನ..!