ಬೆಂಗಳೂರು: ಗೂಳಿಹಟ್ಟಿ ಶೇಖರ್ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್ ಬಳಸಿ ಶಿಫಾರಸು ಪತ್ರ ಕೊಟ್ಟ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುರೇಶ್ ಎಂಬುವರನ್ನು ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡುವಂತೆ ಶಿಫಾರಸನ್ನು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೆಸರಲ್ಲಿ ನೀಡಲಾಗಿತ್ತು. ಶಾಸಕರ ಹೆಸರಲ್ಲಿ ನಕಲಿ ಲೆಟರ್ ಬಳಕೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೆಬ್ರವರಿ 13 ರಂದು ಗೂಳಿಹಟ್ಟಿ ಶೇಖರ್ ಹೆಸರಲ್ಲಿ ಈ ಪತ್ರ ರವಾನೆಯಾಗಿತ್ತು.
ಸುರೇಶ್ ಎಂಬ ವ್ಯಕ್ತಿಯನ್ನು ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಪತ್ರ ಬರೆಯಲಾಗಿದೆ. ಇದಕ್ಕೆ ಸಂಬಂಧಿಸಿದ ಕಡತವು ಅರಣ್ಯ ಇಲಾಖೆ ಅಪರ ಕಾರ್ಯದರ್ಶಿ ಬಳಿಯಿದ್ದು, ಕೂಡಲೇ ಅನುಮೋದಿಸಿ ಆದೇಶ ನೀಡುವಂತೆ ಶಿಫಾರಸು ಪತ್ರ ರವಾನಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 590 ಮಂದಿಗೆ ಸೋಂಕು ದೃಢ; 6 ಮಂದಿ ಬಲಿ
ನಕಲಿ ಶಿಫಾರಸು ಪತ್ರ ತಯಾರಿಸಿ ಗೂಳಿಹಟ್ಟಿ ಶೇಖರ್ ಸಹಿ ನಕಲಿ ಮಾಡಿರೋ ಆರೋಪಿಗಳು, ಅರಣ್ಯ ಸಚಿವ ಆನಂದ್ ಸಿಂಗ್ ಕಚೇರಿಗೆ ರವಾನಿಸಿದ್ದಾರೆ. ಗೂಳಿಹಟ್ಟಿ ಶೇಖರ್ ಎಂದು ಅರಣ್ಯ ಸಚಿವರ ಆಪ್ತ ಸಹಾಯಕರಿಗೆ ಕರೆ ಮಾಡಿರೋ ಅಸಾಮಿಗಳು, ಕಡತ ಕ್ಲಿಯರ್ ಮಾಡುವಂತೆ ಸಚಿವರ ಹೆಸರಿನಲ್ಲಿ ಕರೆ ಮಾಡಿ ಒತ್ತಡವನ್ನೂ ಸಹ ಹಾಕಿದ್ದಾರೆ.
ಕಡತದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಸಚಿವ ಸಿ.ಸಿ. ಪಾಟೀಲ್ ಶಿಫಾರಸು ಪತ್ರಗಳು ಸಹ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಕಡತ ಮತ್ತು ಶಿಫಾರಸು ಪತ್ರಗಳ ನೈಜತೆ ಪರಿಶೀಲನೆಗೆ ಸೂಚನೆ ಕೂಡ ನೀಡಲಾಗಿದೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.