ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ, ಚಿತ್ರದ ಟೈಟಲ್ ನಿಂದಲೇ ಹವಾ ಸೃಷ್ಟಿಸಿರೋ ಚಿತ್ರ ಕಬ್ಜ. ನಿರ್ದೇಶಕ ಆರ್.ಚಂದ್ರು ನಿರ್ದೇಶನದಲ್ಲಿ, ರಿಯಲ್ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಅವರ ಜೋಡಿಯಾಗಿ ಸೌತ್ ಬ್ಯೂಟಿ ಶ್ರೇಯಾ ಸರಣ್ ಚಿತ್ರಕ್ಕೆ ಆಯ್ಕೆ ಆಗಿದ್ದು, ಶೂಟಿಂಗ್ನಲ್ಲೂ ಭಾಗಿಯಾಗಿದ್ದಾರೆ. ಇದೀಗ ಈ ಚಿತ್ರದ ಟೀಸರ್ ಯಾವಾಗ ಬರಬಹುದು ಎಂದು ಅಭಿಮಾನಿ ಸಮೂಹ ಕಾತರದಿಂದ ಕಾಯುತ್ತಿತ್ತು. ಈಗ ಆ ಸಮಯ ನಿಗದಿಯಾಗಿದೆ. ಚಿತ್ರದ ನಾಯಕ ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಕಬ್ಜ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಟೀಸರ್ ಸೆಪ್ಟೆಂಬರ್ 17ರ ಸಂಜೆ 5 ಗಂಟೆಗೆ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದಾರೆ. ಈಗಾಗಲೇ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಸೇರಿದ್ಂತೆ ದೊಡ್ಡ ಸ್ಟಾರ್ ಕಾಸ್ಟ್ಗೆ ಈ ಸಿನಿಮಾ ಸೌಂಡ್ ಮಾಡುತ್ತಿದೆ. ಐ ಮೂವಿ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ ಕಬ್ಜ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್ ಅವರ ಸಾಹಸ ನಿರ್ದೇಶನ ಚಿತ್ರಕಿದೆ.
ಕನ್ನಡಿಗರ ಹೆಮ್ಮೆಯ ಕೆ.ಜಿ.ಎಫ್2 ಚಿತ್ರ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದ್ದು, ಇದೀಗ "ಕಬ್ಜ" ಚಿತ್ರ ಕೂಡ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಚಿತ್ರ ಗೆದ್ದರೆ ಮತ್ತೊಮ್ಮೆ ಬಾಲಿವುಡ್ನಲ್ಲಿ ಕನ್ನಡ ಚಿತ್ರ ನಂಬರ್ ಪಟ್ಟ ಪಡೆದುಕೊಳ್ಳಲಿದೆ ಎಂಬುದು ಸಿನಿ ಪಂಡಿತರ ಅಭಿಪ್ರಾಯ.
ಇದನ್ನೂ ಓದಿ: ಬಿಡುಗಡೆಗೆ ಸಜ್ಜಾಗಿದೆ 'ರಾಣ': ನಿರ್ಮಾಪಕ ಕೆ.ಮಂಜು ಪುತ್ರನಿಗೆ ಬ್ರೇಕ್ ಕೊಡುತ್ತಾ ಚಿತ್ರ?