ಬೆಂಗಳೂರು: ಬಿಜೆಪಿ ಮತ್ತು ಆರ್ಎಸ್ಎಸ್ನ ಅಜೆಂಡಾಗಳನ್ನು ನಾವು ಎದುರಿಸಬೇಕಿದೆ. ದಲಿತರು, ಬಡವರು ಮತ್ತು ಅಲ್ಪಸಂಖ್ಯಾತರ ಹಿತದೃಷ್ಟಿಯ ಪರವಾಗಿ ಕಾಂಗ್ರೆಸ್ ನಿಲ್ಲಬೇಕಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕರೆ ಕೊಟ್ಟಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಹಿರಿಯ ಮುಖಂಡರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಡಿಸಿಸಿ ಅಧ್ಯಕ್ಷರು ಹಾಗು ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ನಿರಂತರವಾಗಿ ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಸಮಾಜದ ಮೇಲೆ ದಾಳಿ ನಡೆಯುತ್ತಿದೆ. ಚುನಾವಣೆ ಎದುರಿಸುವ ಜೊತೆಗೆ ಬಿಜೆಪಿ ನಡೆಸುತ್ತಿರುವ ದಬ್ಬಾಳಿಕೆಗಳನ್ನು ಎದುರಿಸಬೇಕಿದೆ. ಗ್ರಾಮ ಪಂಚಾಯಿತಿ ಚುನಾವಣೆ ಪ್ರಜಾಪ್ರಭುತ್ವದ ಪ್ರಮುಖ ಅಂಶ. ಕರ್ನಾಟಕದಲ್ಲಿ ಕಾಂಗ್ರೆಸ್ ಭವಿಷ್ಯದ ದೃಷ್ಟಿಯಿಂದಲೂ ಈ ಚುನಾವಣೆ ಮಹತ್ವದ್ದು ಎಂದರು.
'ಯಡಿಯೂರಪ್ಪನವರದ್ದು ಅಕ್ರಮ ಹಣದ ಸರ್ಕಾರ'
ಗೆಲ್ಲಬಹುದಾದ ಅಭ್ಯರ್ಥಿಗಳನ್ನೇ ನಾವು ಆಯ್ಕೆ ಮಾಡಬೇಕು. ಹೊಸ ಮತ್ತು ಯುವ ಅಭ್ಯರ್ಥಿಗಳನ್ನು, ನಾಯಕರನ್ನು ಆಯ್ಕೆ ಮಾಡೋಣ. ಒಗ್ಗಟ್ಟಿನಿಂದ ನಾವು ನಮ್ಮ ಪಂಚಾಯತಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಯಡಿಯೂರಪ್ಪ ಸರ್ಕಾರ ಜನರ ಆಯ್ಕೆಯಿಂದ ರಚನೆಯಾದ ಸರ್ಕಾರವಲ್ಲ. ಭ್ರಷ್ಟಾಚಾರ, ಅಕ್ರಮ ಹಣದ ಮೂಲಕ ರಚನೆಯಾದ ಸರ್ಕಾರ ಎಂದು ಸುರ್ಜೇವಾಲಾ ದೂರಿದರು.
'ರಾಜ್ಯ ಸರ್ಕಾರ ಕುಸಿದು ಬೀಳಲಿದೆ'
ಜನರ ಪರವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿಲ್ಲ, ದೆಹಲಿ ಬಿಜೆಪಿ ನಾಯಕರೂ ಕೂಡ ರಾಜ್ಯ ಸರ್ಕಾರದ ನಡೆಗೆ ಬೇಸತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಕುಸಿದು ಬೀಳಲಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಂಡಿತ ಎಂದು ಅವರು ಭವಿಷ್ಯ ನುಡಿದರು.
'ಭಾರತ ಬಂದ್‌ಗೆ ಬೆಂಬಲ'
ದೇಶದ ಅನ್ನದಾತರು ಡಿಸೆಂಬರ್ 8 ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್‌ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ಶಾಸಕರು, ನಾಯಕರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತೇವೆ. ಕೇಂದ್ರದ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ಮಾಡಬೇಕೆಂದು ಸುರ್ಜೆವಾಲಾ ಕರೆ ಕೊಟ್ಟರು.
ಓದಿ: ತನ್ನ ಕಿಡ್ನ್ಯಾಪ್ ಮಾಡಿದವರಿಗೇ ಧನ್ಯವಾದ ಹೇಳ್ಬೇಕು ಅಂತವ್ರೆ ವರ್ತೂರು: ಏನಿದರ ರಾಜಕೀಯ ಮರ್ಮ!?