ಬೆಂಗಳೂರು: ದಕ್ಷಿಣ ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ಪ್ರಶಸ್ತಿಗೆ ರಾಮೋಜಿ ಫಿಲ್ಮ್ ಸಿಟಿ ಭಾಜನವಾಗಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಮೋಜಿ ಫಿಲ್ಮ್ ಸಿಟಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘ (SIHRA) ಪ್ರಕಟಿಸಿದೆ.
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮೋಜಿ ಫಿಲಂ ಸಿಟಿ ಎಂಡಿ ಸಿ.ಎಚ್.ವಿಜಯೇಶ್ವರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ವಿಶಾಖಪಟ್ಟಣದ ನೊವೊಟೆಲ್ ಜತೆಗೆ ದಕ್ಷಿಣದ 19 ಹೊಟೇಲ್ ಮತ್ತು ರೆಸಾರ್ಟ್ ಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ನಿರ್ವಹಣಾ ಸಂಘದ ಅಧ್ಯಕ್ಷ ಕೆ.ಶ್ಯಾಮರಾಜು ಮಾಹಿತಿ ನೀಡಿದ್ದರು. ಕರ್ನಾಟಕ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಚಿವರು ಈ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಶಸ್ತಿ ಸ್ವೀಕರಿಸಿ ಸಂತಸ ಹಂಚಿಕೊಂಡು ಎಂಡಿ: ಪ್ರಶಸ್ತಿ ಸ್ವಿಕಾರದ ಬಳಿಕ ತಮ್ಮ ಅನಿಸಿಕೆ ಹಂಚಿಕೊಂಡ ರಾಮೋಜಿ ಫಿಲ್ಮಂ ಸಿಟಿ ಎಂಡಿ ಸಿ.ಎಚ್ ವಿಜಯೇಶ್ವರಿ, ‘‘ರಾಮೋಜಿ ಫಿಲ್ಮ್ ಸಿಟಿ ವತಿಯಿಂದ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ್ದು ನಿಜಕ್ಕೂ ನನಗೆ ದೊಡ್ಡ ಗೌರವ. ಮೂವತ್ತು ವರ್ಷಗಳ ಹಿಂದೆ ನಮ್ಮ ಸಂಸ್ಥೆಯ ಸಂಸ್ಥಾಪಕರಾದ ರಾಮೋಜಿ ರಾವ್ ಅವರು ಚಿತ್ರರಂಗದ ತಾರೆಯರು, ನಿರ್ಮಾಣ ಸಂಸ್ಥೆಗಳು, ಪ್ರವಾಸಿಗರು ಮತ್ತು ಕಾರ್ಪೊರೇಟ್ ವ್ಯಕ್ತಿಗಳು ಭೇಟಿ ನೀಡುವ ಮತ್ತು ಅತ್ಯುತ್ತಮ ತಾಣವಾಗುವಂತಹ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುವ ಕನಸನ್ನು ಬಿತ್ತಿದ್ದರು. ಆಗ ಅದು ಅನೇಕರಿಗೆ ಅಸಾಧ್ಯವಾದ ಕನಸಾಗಿ ಕಾಣಿಸಿತ್ತು. ಆದರೆ ಇಂದು ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಆತಿಥ್ಯದೊಂದಿಗೆ ಪ್ರವಾಸಿಗರು ಮತ್ತು ಅತಿಥಿಗಳಿಗೆ ತನ್ನ ಸೇವೆಯನ್ನು ಒದಗಿಸುವ ಮೂಲಕ, ಪ್ರವಾಸಿಗರ ಜೀವನದಲ್ಲಿ ಮ್ಯಾಜಿಕ್ ಸೃಷ್ಟಿಸಿದೆ‘‘ ಎಂದು ಹರ್ಷ ವ್ಯಕ್ತಪಡಿಸಿದರು.
ಏನಿದು SIHRA?: ಸಿರಾ ದಕ್ಷಿಣ ಭಾರತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘವಾಗಿದೆ. ಇದರ ಸದಸ್ಯರು ವಿವಿಧ ರೆಸ್ಟೋರೆಂಟ್‌ಗಳು ಮತ್ತು 5 -ಸ್ಟಾರ್ ನಿಂದ ಹಿಡಿದು ಡಿಲಕ್ಸ್ ವಿಭಾಗಗಳವರೆಗಿನ ಸಣ್ಣ ಹೋಟೆಲ್‌ಗಳನ್ನು ಒಳಗೊಂಡಿರುವ ಒಂದು ಸಂಘಟನೆಯಾಗಿದೆ. ಅದರ ಬಹುಪಾಲು ಸದಸ್ಯರು ರೆಸ್ಟೋರೆಂಟ್‌ಗಳು ಮತ್ತು ಬಜೆಟ್ ಹೋಟೆಲ್‌ಗಳ ಮಾಲೀಕರೇ ಆಗಿದ್ದಾರೆ. SIHRA ಸಂಘಟನೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳನ್ನು ಒಳಗೊಂಡಿದೆ. ಹೊಸದಿಲ್ಲಿಯಲ್ಲಿರುವ ಫೆಡರೇಶನ್ ಆಫ್ ದಿ ಹೊಟೇಲ್ & ರೆಸ್ಟೊರೆಂಟ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FHRAI) ನ ಒಂದು ವಿಭಾಗವಾಗಿದೆ.
ಇದನ್ನು ಓದಿ: ಕುಕ್ಕೆ ಸುಬ್ರಮಣ್ಯ ಚಂಪಾಷಷ್ಠಿಗೆ ಮುಖ್ಯಮಂತ್ರಿ, ಮುಜುರಾಯಿ ಸಚಿವರಿಗೆ ಆಮಂತ್ರಣ ನೀಡಿದ ದೇಗುಲ ಆಡಳಿತ ಮಂಡಳಿ