ಬೆಂಗಳೂರು: ರಮೇಶ್ ಕುಮಾರ್ ಒಬ್ಬ ಕ್ರಿಮಿನಲ್ ಸ್ಪೀಕರ್. ಅವರು 17 ಜನ ಶಾಸಕರನ್ನು ಅನರ್ಹಗೊಳಿಸಿದರು. ಬಹುಶಃ ಇಂತಹ ವಿಕೃತ ಮನಸ್ಸಿನ ಸ್ಪೀಕರ್ರನ್ನು ರಾಜ್ಯ ಎಂದೂ ಕಂಡಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅವರು 17 ಮಂದಿ ಶಾಸಕರ ಭವಿಷ್ಯ ಹಾಳು ಮಾಡಿದರು. ನಾವು ಆಪರೇಷನ್ ಕಮಲ ಯಾವತ್ತೂ ಮಾಡಿಲ್ಲ. ಆ ಪಕ್ಷದ ಒಳ ಜಗಳ, ಕಚ್ಚಾಟ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅವರು ರಾಜೀನಾಮೆ ನೀಡಿದ್ದಾರೆ ಎಂದರು.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲ್ಲುವುದು ಅಷ್ಟೇ ಸತ್ಯ. ಕಾಂಗ್ರೆಸ್ನಂತೆ ಮೂಲ ಮತ್ತು ವಲಸಿಗರು ನಮ್ಮಲ್ಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಕೈ ನಾಯಕರೇ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಕಾಡಿ ಬೇಡಿ ಪ್ರತಿಪಕ್ಷ ನಾಯಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ಗೆ ಭವಿಷ್ಯ ಇಲ್ಲ. ಮುಂದೆ ಹಲವರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಹೆಚ್ಡಿಕೆ ಮಾನಸಿಕವಾಗಿ ಅಸ್ವಸ್ಥ;
ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಅಧಿಕಾರ ಕಳಕೊಂಡ ಹೆಚ್ಡಿಕೆ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರು ಹತಾಶರಾದ್ದಾರೆ ಎಂದು ವಾಗ್ದಾಳಿ ನಡೆಸಿದರು.
2008ರಲ್ಲಿ ಅಧಿಕಾರ ಹಸ್ತಾಂತರ ಮಾಡದೆ ಹೆಚ್ಡಿಕೆ ವಚನಭ್ರಷ್ಟರಾಗಿದ್ದರು. ಅದರ ಪ್ರಾಯಶ್ಚಿತ್ತಕ್ಕಾಗಿ ಅವರು ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. 15 ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸುವುದು, ಸೋಲಿಸುವುದು ಕ್ಷೇತ್ರದ ಮತದಾರರು. ಹೆಚ್ಡಿಕೆ ಅವರೇ ನಿಮಗೆ ಸೋಲಿಸುವ ಶಕ್ತಿಯೂ ಇಲ್ಲ. ಮುಂದೆ ಕುಮಾರಸ್ವಾಮಿ ಪಕ್ಷವೇ ಇರಲ್ಲ. ಚುನಾವಣೆ ಆದ ಬಳಿಕ ಜೆಡಿಎಸ್ ಅಡ್ರೆಸ್ಸೇ ಇರಲ್ಲ ಎಂದು ಕಿಡಿಕಾರಿದರು.