ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿಯನ್ನೂ ಪ್ರತಿವಾದಿಯಾಗಿ ಸೇರಿಸಿಕೊಳ್ಳಲು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನೂ ಒಟ್ಟಾಗಿ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ವಕೀಲ ಎಸ್ ಉಮೇಶ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಯುವತಿ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್, ಪೊಲೀಸರು ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸುವ ಹಂತದಲ್ಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಸಿಬಿಐ ತನಿಖೆ ಕೋರಿರುವ ಪಿಐಎಲ್ನಲ್ಲಿ ಯುವತಿ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಮುಕ್ತಾಯವಾಗುವವರೆಗೆ ಪ್ರಕರಣವನ್ನು ಮುಕ್ತಾಯಗೊಳಿಸಬಾರದು.
ಹಾಗೆಯೇ ಜಾರಕಿಹೊಳಿ ಸಲ್ಲಿಸಿರುವ ದೂರನ್ನು ರದ್ದು ಕೋರಿ ಸಲ್ಲಿರುವ ಮತ್ತೊಂದು ರಿಟ್ ಅರ್ಜಿಯನ್ನು ಏಕಸದಸ್ಯ ಪೀಠದಿಂದ ಇಲ್ಲಿಗೇ ವರ್ಗಾಯಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಜುಲೈ 5ರೊಳಗೆ ಮುಕ್ತಾಯಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು. ಈ ವೇಳೆ ಪೀಠ ಮೌಖಿಕವಾಗಿ ಎಫ್ಐಆರ್ ಮುಕ್ತಾಯಗೊಳಿಸದಂತೆ ಸೂಚಿಸಿತು.
ಇದೇ ವೇಳೆ ಅಡ್ವೋಕೇಟ್ ಜನರಲ್ ಪೀಠಕ್ಕೆ ಮನವಿ ಮಾಡಿ, ಯುವತಿಯು ರಮೇಶ್ ಜಾರಕಿಹೊಳಿ ಅವರು ಸದಾಶಿವನಗರದಲ್ಲಿ ದಾಖಲಿಸಿರುವ ಎಫ್ಐಆರ್ ಹಾಗೂ ತನಿಖೆಯನ್ನು ರದ್ದು ಮಾಡುವಂತೆ ಸಲ್ಲಿಸಿರುವ ರಿಟ್ ಅರ್ಜಿ ಏಕಸದಸ್ಯ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ.
ಹೀಗಾಗಿ, ಆ ಅರ್ಜಿಯನ್ನೂ ಇದೇ ಪೀಠಕ್ಕೆ ವರ್ಗಾವಣೆ ಮಾಡಿಕೊಂಡು ವಿಚಾರಣೆ ನಡೆಸುವಂತೆ ಕೋರಿದರು. ಈ ವೇಳೆ ಪೀಠ ಅರ್ಜಿ ವರ್ಗಾವಣೆಗೆ ಯಾರದ್ದಾದರೂ ಆಕ್ಷೇಪಣೆ ಇದೆಯೇ ಎಂದು ಪ್ರಶ್ನಿಸಿತು. ಯಾರೂ ಅಭ್ಯಂತರ ವ್ಯಕ್ತಪಡಿಸದ ಹಿನ್ನೆಲೆ ಪೀಠ ಎಲ್ಲ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.
ಸದ್ಯ ಹೈಕೋರ್ಟ್ನಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ, ಎಸ್ಐಟಿ ರಚನೆ ರದ್ದು ಕೋರಿ ಸಲ್ಲಿಸಿರುವ ಅರ್ಜಿ, ಸಿಬಿಐ ತನಿಖೆ ಕೋರಿರುವ ತನಿಖೆಯಲ್ಲಿ ತನ್ನನ್ನೂ ಪ್ರತಿವಾದಿಯಾಗಿಸಬೇಕು ಎಂದು ಯುವತಿ ಕೋರಿರುವ ಅರ್ಜಿ ಹಾಗೂ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ಕೋರಿ ಯುವತಿ ಪ್ರತ್ಯೇಕವಾಗಿ ಸಲ್ಲಿಸಿರುವ ರಿಟ್ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಈ ಎಲ್ಲ ಅರ್ಜಿಗಳನ್ನೂ ಸಿಜೆ ನೇತೃತ್ವದ ವಿಭಾಗೀಯ ಪೀಠ ಜುಲೈ 5ರಂದು ವಿಚಾರಣೆ ನಡೆಸಲಿದೆ.
ಇದನ್ನೂ ಓದಿ:ರಮೇಶ ಜಾರಕಿಹೊಳಿ ಸುತ್ತೂರು ಮಠ ಭೇಟಿಯಲ್ಲಿ ವಿಶೇಷತೆ ಏನೂ ಇಲ್ಲ: ಡಾ.ಕೆ. ಸುಧಾಕರ್