ಬೆಂಗಳೂರು:ಮಹಾನಗರದಲ್ಲಿ ರಸ್ತೆಗುಂಡಿಗಳು ಹೆಚ್ಚಾಗಿವೆ. ಇದನ್ನ ಮುಚ್ಚಿಸುವ ಜವಾಬ್ದಾರಿಯನ್ನು ಸರ್ಕಾರ ತೋರಿಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಗರದ ಪ್ರಮುಖ ರಸ್ತೆಗಳೇ ಹಾಳಾಗಿ ಹೋಗಿವೆ. ಬಿಜೆಪಿಯವರಿಗೆ ಆಡಳಿತ ಮಾಡಲು ಬರಲ್ಲ. ಯಾರಾದರೂ ಮಾಡ್ತಿದರೆ ತಪ್ಪು ಹುಡುಕ್ತಾರೆ, ಅಂತಹ ಜಾಯಮಾನಕ್ಕೆ ಸೇರಿದವರು ಅವರು. ನಮ್ಮ ಅವಧಿಯಲ್ಲೂ ರಸ್ತೆ ಗುಂಡಿಗಳು ಇದ್ದವು. ಆದರೆ, ನಾವು ಕೂಡಲೇ ಮುಚ್ಚುತ್ತಿದ್ದೆವು. ಈಗ ರಸ್ತೆ ಗುಂಡಿಯಿಂದ ನಾಗರಿಕರಿಗೆ ಸಂಕಷ್ಟ ಎಂದರು.
ಯಾವ ರಸ್ತೆ ನೋಡಿದ್ರೂ ಗುಂಡಿಗಳೇ ರೇಸ್ ಕೋರ್ಸ್ ರಸ್ತೆ,ಮಾಗಡಿ ರಸ್ತೆ, ತುಮಕೂರು ರಸ್ತೆ, ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳನ್ನ ಮುಚ್ಚೋಕೆ ಸರ್ಕಾರ ಗಮನ ನೀಡ್ತಿಲ್ಲ. ಕೋರ್ಟ್ ಎಚ್ಚರಿಕೆ ಕೊಟ್ಟ ಮೇಲೆ ಮುಚ್ಚಲು ಹೊರಟಿದ್ದಾರೆ.
ಆದರೂ ಇನ್ನೂ ಗುಂಡಿ ಮುಚ್ಚುವ ಕೆಲಸ ಆಗ್ತಿಲ್ಲ. ಕಾಂಕ್ರೀಟ್ ರಸ್ತೆಗಳು ಹಾಳಾಗಿ ಹೋಗಿವೆ. ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕ್ತಾರೆ. ಆದರೆ, ಅವರ ತಪ್ಪುಗಳನ್ನ ಮುಚ್ಚಿಕೊಳ್ತಾರೆ ಎಂದು ಆರೋಪಿಸಿದರು.
ಮೇಜರ್ ರಸ್ತೆಗಳಿಗೆ ಹೆಚ್ಚಿನ ಹಣ ಮೀಸಲಿರುತ್ತೆ. ಸಿಎಂ ಕೈಯಲ್ಲೇ ಬೆಂಗಳೂರು ಉಸ್ತುವಾರಿ ಇದೆ. ಏಳು ಜನ ಸಚಿವರು ಬೆಂಗಳೂರಿನವರಿದ್ದಾರೆ. ಏಳು ಮಂತ್ರಿಗಳಿದ್ದರೂ ಅವರ ಕೈಯಲ್ಲಿ ಈ ಕೆಲಸ ಆಗ್ತಿಲ್ಲ ಎಂದು ಸಚಿವರ ವಿರುದ್ಧವೂ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸ್ತಿದ್ದಾರೆ. ಹಿಂದೆ ಕೊಟ್ಟ 7 ಸಾವಿರ ಕೋಟಿ ಬಿಟ್ಟರೆ ಬೇರೆ ಅನುದಾನ ಇಲ್ಲ. ಸಿದ್ದರಾಮಯ್ಯ, ಮೈತ್ರಿ ಸರ್ಕಾರದಲ್ಲಿ ಕೊಟ್ಟ ಅನುದಾನ ಬಳಕೆ ಆಗಿದೆ. ಇವರು ಬಂದ ನಂತರ ಯಾವ ಅನುದಾನವಿಲ್ಲ. ಘೋಷಣೆ ಮಾತ್ರ ಹಾಗೇ ಉಳಿದಿದೆ. ಎರಡು ವರ್ಷದಿಂದ ಕೆಲಸವೇ ಆಗಿಲ್ಲ. ಅವರೇ ಹೇಳಿ ಬಿಡ್ಲಿ ಎಷ್ಟು ಹಣ ಕೊಟ್ಟಿದ್ದಾರೆಂದು ಕೇಳಿದರು.
ನನಗೆ ಕೊಟ್ಟು ನೋಡಿ:
ಅವರ ಕ್ಷೇತ್ರಗಳ ರಸ್ತೆ ಕಡೆಯೇ ಗಮನ ಹರಿಸಿಲ್ಲ. ಮಳೆಯಿಂದಾಗಿ ರಸ್ತೆಗಳು ಇನ್ನೂ ಹಾಳಾಗಿವೆ. ಸಿಎಂ ನಗರವೀಕ್ಷಣೆ ಮಾಡಿದ್ರು. ಆದ್ರೂ ರಸ್ತೆ ಗುಂಡಿ ಮುಚ್ಚೋಕೆ ಆಗ್ತಿಲ್ಲ. ನನಗೆ ಜವಾಬ್ದಾರಿ ಕೊಟ್ಟು ನೋಡಿ ಆಮೇಲೆ ಎಂದು ಸರ್ಕಾರಕ್ಕೆ ಸವಾಲ್ ಹಾಕಿದರು.
ದೊಡ್ಡದೊಡ್ಡವರ ಹೆಸರು ತಳುಕು ಹಾಕಿಕೊಂಡಿದೆ:
ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ವಿಚಾರವಾಗಿ ಪ್ರಭಾವಿ ನಾಯಕರ ಮೇಲೆ ಬಿಟ್ ಕಾಯಿನ್ನಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಮಾಡಿದರು. ಬಿಟ್ ಕಾಯಿನ್ ದಂಧೆ ಬಗ್ಗೆ ಕೇಳಿದ್ದೇನೆ. ಮಾಧ್ಯಮಗಳಲ್ಲಿ ಇಬ್ಬರು ಪ್ರಭಾವಿ ರಾಜಕಾರಣಿಗಳು ಎಂದು ಬರ್ತಿದೆ.
10 ಸಾವಿರ ಕೋಟಿ ಟ್ರಾಂಜಾಕ್ಷನ್ ಆಗ್ತಿದೆ ಎಂಬ ಮಾಹಿತಿ ಇದೆ. ಪ್ರಧಾನಿ ಕಾರ್ಯಾಲಯಕ್ಕೂ ಈ ಮಾಹಿತಿ ಹೋಗಿದೆ. ಅಲ್ಲಿಂದ ಆದೇಶ ಬಂದರೆ, ಅರೆಸ್ಟ್ ಮಾಡಬಹುದು. ದೊಡ್ಡದೊಡ್ಡವರ ಹೆಸರು ತಳುಕು ಹಾಕಿಕೊಂಡಿದೆ. ಇದರ ಬಗ್ಗೆ ತನಿಖೆಯಾಗಬೇಕು. ಬೊಮ್ಮಾಯಿ ಸರ್ಕಾರಕ್ಕೆ ಕಂಟಕವಾಗಬಹುದು.
ಯಾವ ತನಿಖೆ ಮಾಡೋದು, ಯಾವುದರ ಬಗ್ಗೆಯೂ ವಿಶ್ವಾಸವಿಲ್ಲ. ಎಲ್ಲ ತನಿಖಾ ಸಂಸ್ಥೆಗಳು ಅವರ ಕೈಯಲ್ಲಿವೆ. ಕೋರ್ಟ್ ಇದರ ಬಗ್ಗೆ ಮಧ್ಯಪ್ರವೇಶ ಮಾಡಬೇಕು. ನ್ಯಾಯಾಂಗ ತನಿಖೆಯಾಗಬೇಕು. ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಯಾವ ಹುತ್ತದಲ್ಲಿ ಯಾವ ಹಾವು ಇದ್ಯೋ. ಸರ್ಕಾರದವರಲ್ಲದಿದ್ರೆ ಪ್ರತಿ ಪಕ್ಷದವರು ಯಾಕೆ ಮಾತನಾಡಬೇಕು. ನಾನು ಎಲ್ಲವನ್ನೂ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು.