ಆನೇಕಲ್(ಬೆಂಗಳೂರು): ಕಟೀಲ್ ಸೆರಿದಂತೆ ಅವರ ಜೊತೆಗಿರುವ ಒಂದಿಷ್ಟು ಜನ ಪುಂಗಿ ಊದೋದಕ್ಕೆ ಲಾಯಕ್ಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಭಾನುವಾರ ತಾಲೂಕಿನ ಚಂದಾಪುರ ಸಮೀಪವಿರುವ ಬೋಧಿಸತ್ವ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಕಟೀಲ್ ಅವರು ಏನ್ ಮಾತಾಡ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಯಾರೋ ಏನೋ ಬರೆದು ಕಳಿಸ್ತಾರೆ, ಅದನ್ನ ಇವರು ಪುಂಗಿ ಊದುತ್ತಾರೆ. ಇನ್ನು, ರಾಜ್ಯದಲ್ಲಿ 40% ಕಮಿಷನ್ ಮತ್ತು ಪಿಎಸ್ಐ ಹಗರಣ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ರಾಮಲಿಂಗ ರೆಡ್ಡಿ ಹರಿಹಾಯ್ದಿದ್ದಾರೆ.
ಡರ್ಟಿ ಸರ್ಕಾರದಿಂದ ಏನ್ ನಿರೀಕ್ಷೆ ಮಾಡಕ್ಕಾಗುತ್ತೆ. ಯಾವತ್ತಾದ್ರೂ ಸ್ವತಂತ್ರ ಬಂದ ನಂತರ ಈ ಮಟ್ಟಕ್ಕೆ, ಲಂಚ ತಗೊಳೋದು ಕಂಡಿದ್ದೀರಾ. ಈ ಕೇಂದ್ರ ಅಥವಾ ರಾಜ್ಯದಲ್ಲಾಗಿರಲಿ, 2018ರಲ್ಲಿ ನರೇಂದ್ರ ಮೋದಿ ಬಂದಾಗ ಸಿದ್ದರಾಮಯ್ಯ ಸರ್ಕಾರ 10% ಕಮಿಷನ್ ಸರ್ಕಾರ ಅಂತ ಹೇಳಿದ್ರು. ಅವತ್ತು ಸಿದ್ದರಾಮಯ್ಯ ಅವರ ಬಗ್ಗೆ ಯಾವುದೇ ಆರೋಪಗಳಿರಲಿಲ್ಲ. ಇವತ್ತು ಇವ್ರು ಪಾಲಿಟಿಕ್ಸ್ ಮಾಡ್ತಿದ್ದಾರೆ, ಡರ್ಟಿ ಸರ್ಕಾರ, ಯಾವುದೇ ಭ್ರಷ್ಟಾಚಾರ ಇಲ್ಲದೆ ಸರ್ಕಾರ ನಡೆಸಿಕೊಂಡು ಹೋಗ್ಲಿ ಅನ್ನೋದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಕಿವಿಮಾತನ್ನು ಹೇಳ್ತೇನೆ ಎಂದು ರಾಮಲಿಂಗ ರೆಡ್ಡಿ ಹೇಳಿದರು.
ಶಿಕ್ಷಕರ ಹಗರಣ ವಿಚಾರಕ್ಕೆ ಸಂಬಂಧಪಟ್ಟಂತೆ ರಾಮಲಿಂಗ ರೆಡ್ಡಿ ತಿರುಗೇಟು: 2013 ರಿಂದ 2018 ರವರೆಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ವಿರೋಧ ಪಕ್ಷದಲ್ಲಿದ್ದ ನೀವು ಏನ್ ಕಡಲೆಕಾಯಿ ತಿಂತಿದ್ರಾ. ಇವತ್ತೇನು ಅವರ ಮೇಲೆ ಅಪವಾದ ಬಂತೆಂದು ಕಾಂಗ್ರೆಸ್ ಮುಖಂಡರ ಮೇಲೆ ಭ್ರಷ್ಟಾಚಾರ ಅಂತೆಲ್ಲ ಹೇಳ್ತಿದಿರಲ್ಲ, ಒಟ್ಟು 11 ಶಿಕ್ಷಕರ ಹಗರಣದಲ್ಲಿ ಕಾಂಗ್ರೆಸ್ ಇದ್ದಾಗ ಎರಡು ಅಗಿತ್ತು, ಇನ್ನೆರಡು ಕುಮಾರಸ್ವಾಮಿ ಇದ್ದಾಗ ಉಳಿದ 7 ಬಿಜೆಪಿ ಸರ್ಕಾರದಲ್ಲಿ ಮಾಡಿರೋದು ಎಂದು ಹೇಳಿದರು.
ಬಿಜೆಪಿ ಬುರುಡೆ ಬಿಡುವ ಪಕ್ಷ, ಅದಕ್ಕೆ ಅಧ್ಯಕ್ಷ ಬೇರೆ ಇದ್ದಾರೆ ಕಟೀಲ್ ಕೇವಲ ನಾಮಕಾವಸ್ಥೆಯ ಅಧ್ಯಕ್ಷ. ಪಕ್ಷದಲ್ಲಿ ಅವರಿಗೆ ಏನು ಅಧಿಕಾರಗಳಿಲ್ಲ, ಮೇಲೆ ಏನು ಬರೆದುಕೊಡ್ತಾರೋ ಅದನ್ನ ಇವರು ಪುಂಗಿ ಊದುತ್ತಾರೆ ಅಷ್ಟೇ. ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪಿಟೀಲು ಚೆನ್ನಾಗಿ ಬಾರಿಸ್ತಾರೆ. ಇಂತಹ ಬುರಡೆ ಬಿಡುವ ಮತ್ತು ಭ್ರಷ್ಟ ಪಕ್ಷದವರಿಂದ ಕಾಂಗ್ರೆಸ್ ಪಕ್ಷದವರು ಏನು ಕಲಿಯೋದು ಇಲ್ಲ ಎಂದು ರಾಮಲಿಂಗ ರೆಡ್ಡಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆ: ಕಲಬುರಗಿಯಿಂದ ನೇರವಾಗಿ ಜೈಪುರಕ್ಕೆ ಬಂದ ಖರ್ಗೆ