ಬೆಂಗಳೂರು : ಡಿಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಿದ್ದು ನಿಜ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮೇಯರ್ ಸಂಪತ್ ರಾಜ್ ತಲೆಮರೆಸಿಕೊಳ್ಳುವ ಅವಶ್ಯಕತೆ ಇರಲಿಲ್ಲ.
ಸರಿ ತಪ್ಪು ಕೋರ್ಟ್ ತೀರ್ಮಾನ ಮಾಡುತ್ತದೆ ಎಂದರು. ಅಖಂಡ ಶ್ರೀನಿವಾಸಮೂರ್ತಿ ಮತ್ತು ಸಂಪತ್ ರಾಜ್ ನಡುವೆ ತಪ್ಪು ಗ್ರಹಿಕೆ ಉಂಟಾಗಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ಗೆ ಮುಜುಗುರವಾಗಿರುವುದು ಸಹಜ ಎಂದು ಹೇಳಿದರು.
ಎಲ್ಲ ಸಮುದಾಯಗಳಿಗೂ ಪ್ರಾಧಿಕಾರ ರಚನೆಯಾಗಲಿ : ಪ್ರಾಧಿಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಎಲ್ಲ ಸಮುದಾಯಗಳಿಗೂ ಪ್ರಾಧಿಕಾರ ಮಾಡಿ ಬಿಡಲಿ. ಕೆಲವರಿಗೆ ಮಾಡಿ, ಕೆಲವರಿಗೆ ಮಾಡದಿದ್ದರೆ ತಪ್ಪಾಗುತ್ತದೆ. ಎಲ್ಲ ಸಮುದಾಯಗಳಿಗೂ ಮಾಡಲಿ. ಚುನಾವಣೆ ವೇಳೆ ಮಾಡಿದರೆ ರಾಜಕೀಯ ಪ್ರೇರಿತವಾಗುತ್ತದೆ. ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಲಿ ಎಂದರು.
ಮರಾಠ ಪ್ರಾಧಿಕಾರ ರಚನೆಗೆ ನನ್ನ ಸ್ವಾಗತವಿದೆ. ಆದರೆ, ಎಲ್ಲರಿಗೂ ಒಂದೇ ರೀತಿಯ ನ್ಯಾಯ ಸಿಗಬೇಕು. ನಮ್ಮ ಸಮುದಾಯಕ್ಕೂ ನಿಗಮ ಮಾಡುವಂತೆ ಹಿಂದಿನ ಸರ್ಕಾರದಲ್ಲಿ ಒತ್ತಾಯ ಮಾಡಲಾಗಿತ್ತು. ಈಗಲೂ ನಮ್ಮ ಒತ್ತಾಯ ಇದೆ ಎಂದು ಹೇಳಿದರು.