ಬೆಂಗಳೂರು : ಬಂಗಾಳ ಉಪಸಾಗರದ ಉತ್ತರ ಭಾಗದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಈ ಪ್ರಭಾವದಿಂದ ರಾಜ್ಯದ ಹಲವೆಡೆ ಜುಲೈ 31ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 27ರಿಂದ ಜುಲೈ 31ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಮುಂದಿನ ಎರಡು ದಿನ ನಗರ ಸೇರಿದಂತೆ ಸುತ್ತಮುತ್ತಲ ಕೆಲವೆಡೆ ಮಾತ್ರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 29 ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದಿದ್ದಾರೆ.
ನೈರುತ್ಯ ಮುಂಗಾರು ಮಂಗಳವಾರ ಕರಾವಳಿಯಲ್ಲಿ ಸಾಮಾನ್ಯವಾಗಿತ್ತು. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಾತ್ರ ಮಳೆಯಾಗಿದೆ. ಮುಖ್ಯವಾಗಿ, ಶಿವಮೊಗ್ಗ ಮತ್ತು ಕೊಲ್ಲೂರಿನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.