ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲು ರೈಲ್ವೆ ಅಧಿಕಾರಿಗಳ ತಂಡ ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿತು.
ಪದ್ಮನಾಭನಗರದಲ್ಲಿರುವ ಹೆಚ್ಡಿಡಿ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈಲ್ವೆ ಯೋಜನೆಗಳ ಬಗ್ಗೆ ದೇವೇಗೌಡರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇನ್ನು ರೈಲ್ವೆ ಅಧಿಕಾರಿಗಳ ತಂಡವನ್ನು ತಮ್ಮನ್ನು ಭೇಟಿ ಮಾಡಲು ಕಳುಹಿಸಿದ್ದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ವೀಟ್ ಮೂಲಕ ದೇವೇಗೌಡರು ಧನ್ಯವಾದ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಆಗಸ್ಟ್ 4 ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಭೇಟಿ ಮಾಡಿದ್ರು. ಈ ವೇಳೆ, ಜಿಲ್ಲೆಯ ರೈಲ್ವೆ ಯೋಜನೆಗಳಾದ ಹಾಸನ – ಬೇಲೂರು – ಚಿಕ್ಕಮಗಳೂರು ಹೊಸ ಮಾರ್ಗಕ್ಕೆ ಭೂ ಸ್ವಾಧೀನ ಮತ್ತು ಕಾಮಗಾರಿ ಕೈಗೊಳ್ಳುವುದು, ಮೈಸೂರು – ಅರಸೀಕೆರೆ ನಡುವೆ ಹೆಚ್ಚುವರಿಯಾಗಿ ಪುಷ್ ಪುಲ್ ರೈಲು ಸಂಚಾರ, ಸ್ವರ್ಣ ಜಯಂತಿ ಮೈಸೂರು ನಿಜಾಮುದ್ದೀನ್ ರೈಲು (ದೆಹಲಿಗೆ ಸಂಚರಿಸುವ) ಹೊಳೆನರಸೀಪುರ ನಿಲ್ದಾಣದಲ್ಲಿ ನಿಲುಗಡೆ ಕೊಡುವ ಬಗ್ಗೆ, ಹಾಸನದಲ್ಲಿ ಹೊಸ ರೈಲ್ವೆ ನಿಲ್ದಾಣ ನಿರ್ಮಾಣ, ಹೊಳೆನರಸೀಪುರದ ಹಂಗರಹಳ್ಳಿ ಬಳಿ ರೈಲ್ವೆ ಮೇಲ್ಸೆತುವೆ ಕಳಪೆ ಕಾಮಗಾರಿಯಾಗಿದ್ದು, ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ಮನವಿ ಮಾಡಿದ್ದರು.
ಮೈಸೂರು–ಅರಸೀಕೆರೆ ಭಾಗದಲ್ಲಿ ಎರಡು ರೈಲ್ವೆ ಅಂಡರ್ ಪಾಸ್ ನಿರ್ಮಾಣ ಸೇರಿದಂತೆ ಇತರ ಜಿಲ್ಲೆಯ ಇನ್ನಿತರ ರೈಲ್ವೆ ಯೋಜನೆಗಳ ಮಂಜೂರಾತಿ ನೀಡುವಂತೆ ಮನವಿ ಪತ್ರ ನೀಡಿ ಕೋರಿದ್ದರು. ದೇವೇಗೌಡರ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಾವು ಸಲ್ಲಿಸಿರುವ ಹಾಸನ ಜಿಲ್ಲೆಯ ಯೋಜನೆಗಳಿಗೆ ಅನುಮೋದನೆ ನೀಡಿ ಎಲ್ಲಾ ಯೋಜನೆಗಳಿಗೆ ಚಾಲನೆ ನೀಡುವ ಭರವಸೆ ನೀಡಿದ್ದರು.
ಕೇಂದ್ರ ರೈಲ್ವೆ ಸಚಿವರ ಸೂಚನೆಯಂತೆ ಮೈಸೂರು ಮತ್ತು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮತ್ತು ಶ್ಯಾಮ್ ಸಿಂಗ್, ಮುಖ್ಯ ಆಡಳಿತಾಧಿಕಾರಿ ದೇಶ್ ರತನ್ ಗುಪ್ತಾ, ನಿರ್ಮಾಣ ಸಂಸ್ಥೆಯ ಮುಖ್ಯ ಅಭಿಯಂತರ ಆನಂದ್ ಭಸ್ತಿ, ವಿಭಾಗೀಯ ಅಭಿಯಂತರ ರವಿಚಂದ್ರೋನ್ ಮತ್ತು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ರೆಡ್ಡಿ ಅವರು, ದೇವೇಗೌಡರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು.