ಬೆಂಗಳೂರು: ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಅವರಿಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾದರು. ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ವಂಚಿತ ದೊಡ್ಡಪ್ಪ ಗೌಡ, ಗುರುಲಿಂಗಪ್ಪ ಗೌಡ, ಶಹಪುರ್ ಗುರು ಪಾಟೀಲ್, ಸವಿತಾ ಬಾಯಿ ಹಾಗು ಚೈತ್ರ ಖೋಟೇಕರ್ ಸೇರಿದಂತೆ 100ಕ್ಕೂ ಅಧಿಕ ಮುಖಂಡರು ಜೆಡಿಎಸ್ ಸೇರಿದ್ದಾರೆ. ಶಾಲು ಹಾಗೂ ಪಕ್ಷದ ಬಾವುಟ ನೀಡಿ ಜೆಡಿಎಸ್‌ಗೆ ಸೇರಿಸಿಕೊಳ್ಳಲಾಯಿತು. ಸೂಲಗಿತ್ತಿ ನರಸಮ್ಮನವರ ಪುತ್ರ ಪಾವಗಡ ಶ್ರೀರಾಮ್ ಕೂಡ ಜೆಡಿಎಸ್ ಸೇರಿದರು.
"ಕುಮಾರಸ್ವಾಮಿ ಆರೋಗ್ಯ ಶ್ರೀ ಯೋಜನೆ ತಂದಿದ್ದರಿಂದ ನಮ್ಮ ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಆ ಋಣ ತೀರಿಸುವುದು ನನ್ನ ಜವಾಬ್ದಾರಿ. ಹೀಗಾಗಿ ಜೆಡಿಎಸ್ ಸೇರಿದ್ದೇನೆ" ಎಂದು ಪಾವಗಡ ಶ್ರೀರಾಮ್ ತಿಳಿಸಿದರು.
ರಘು ಆಚಾರ್ ಮಾತನಾಡಿ, "ನಾನು ಅಧಿಕಾರದ ಆಸೆಗೆ ಇಲ್ಲಿಗೆ ಬಂದಿಲ್ಲ. ಸಾಮಾಜಿಕ ನ್ಯಾಯಕ್ಕೆ ಬಂದಿದ್ದೇನೆ. ಚಿತ್ರದುರ್ಗದಲ್ಲಿ ನಾಲ್ಕು ಸ್ಥಾನ ಗೆಲ್ಲುತ್ತೇವೆ. ದಾವಣಗೆರೆಯಲ್ಲೂ ಎರಡು ಗೆಲ್ಲುತ್ತೇವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು. ನಾನು ಕಾಂಗ್ರೆಸ್ನಲ್ಲಿ ಇರುವಷ್ಟು ದಿನ ನಿಷ್ಠಾವಂತನಾಗಿ ಕೆಲಸ ಮಾಡಿದ್ದೆ. ಇಲ್ಲಿಯೂ ಸಹ ಮನೆ ಮಗನಾಗಿ ಇರ್ತೀನಿ. ನನಗೆ ಚಿತ್ರದುರ್ಗದ ಜನರು ಮುಖ್ಯ. ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ" ಎಂದರು.
ಉ.ಕರ್ನಾಟಕದಲ್ಲಿ 40 ಸ್ಥಾನ ಗೆಲ್ಲುತ್ತೇವೆ: ಈ ಬಾರಿ ಉತ್ತರ ಕರ್ನಾಟಕದಲ್ಲಿ ನಲವತ್ತು ಸ್ಥಾನ ಗೆಲ್ಲುತ್ತೇವೆ. ಜನತಾ ಪರಿವಾರದಲ್ಲಿ ಬೆಳೆದು ಕಾಂಗ್ರೆಸ್, ಬಿಜೆಪಿಗೆ ಹೋಗಿದ್ದವರು ಈಗ ಮರಳಿ ಗೂಡಿಗೆ ಬಂದಿದ್ದಾರೆ ಎಂದು ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಇನ್ನೂ ಹಲವರು ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ದೊಡ್ಡ ಶಕ್ತಿ ಇರುವವರು ಸಹ ಪಕ್ಷ ಸೇರಲಿದ್ದಾರೆ. ನಮ್ಮ ಪಕ್ಷಕ್ಕೆ ಜನ ಸೇರುತ್ತಾರೆ, ಆದರೆ ವೋಟ್ ಸಿಗುವುದಿಲ್ಲ ಎಂಬ ಅಪವಾದವಿದೆ. ಈ ಬಾರಿ ಅದಕ್ಕೆಲ್ಲ ಉತ್ತರ ಸಿಗಲಿದೆ ಎಂದು ನುಡಿದರು.
ಜನತಾದಳ ಕಚೇರಿ ಹಾಲು ತುಂಬಿದ ಕೊಡವಾಗಿ ರಾರಾಜಿಸುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ಗಾಳಿ ಬೀಸುತ್ತಿದೆ ಎಂದು ಮಾಜಿ ಸಿ.ಎಂ.ಇಬ್ರಾಹಿಂ ತಿಳಿಸಿದರು. ಜೇವರ್ಗಿಯಲ್ಲಿ ಮಾಜಿ ಶಾಸಕರಿಗೆ ನಾಲ್ಕು ತಿಂಗಳ ಹಿಂದೆ ನೀವು ಜೆಡಿಎಸ್ ಅಭ್ಯರ್ಥಿ ಆಗುತ್ತೀರಿ ಎಂದು ಹೇಳಿದ್ದೆ. ದೊಡ್ಡನಗೌಡರು ಮತ್ತು ಶಹಪುರ್ ಸೇರಿರುವುದು ನಮ್ಮ ಪಕ್ಷಕ್ಕೆ ಬಲ ತಂದಿದೆ. ರಘು ಆಚಾರ್ ಚಿತ್ರದುರ್ಗದಲ್ಲಿ ಅಭ್ಯರ್ಥಿಯಾಗಿದ್ದು ಎಲ್ಲರೂ ಹೆದರಿಕೊಂಡಿದ್ದಾರೆ. ರಘು ಆಚಾರ್ ಗೆದ್ದೇ ಗೆಲ್ತಾರೆ ಎಂದರು.
ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯಗೆ ಟಿಕೆಟ್ ನಿರಾಕರಣೆ?