ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕಿರ್ಗೆ ಜಾಮೀನು ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಹಾಗೂ ಆರೋಪಿಗಳಿಬ್ಬರಿಗೂ ನೋಟಿಸ್ ಜಾರಿ ಮಾಡಿದೆ.
ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಸಂಪತ್ ರಾಜ್ ಹಾಗೂ ಅಬ್ದುಲ್ ರಕೀಬ್ ಜಾಕಿರ್ಗೆ ಹೈಕೋರ್ಟ್ ಫೆಬ್ರವರಿ 12ರಂದು ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ನ ಈ ಆದೇಶ ಪ್ರಶ್ನಿಸಿ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಹೃಶಿಕೇಶ್ ರಾಯ್ ಅವರಿದ್ದ ಪೀಠ ರಾಜ್ಯ ಸರ್ಕಾರಕ್ಕೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಮೂರು ವಾರಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಾದ ಸಂಪತ್ ರಾಜ್ ಹಾಗೂ ಅಬ್ದುಲ್ ರಕೀಬ್ ಜಾಕಿರ್ಗೆ ನೋಟಿಸ್ ನೀಡಿದೆ.
ಅರ್ಜಿದಾರ ಅಖಂಡ ಶ್ರೀನಿವಾಸ್, ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕಿರ್ ಪಾತ್ರ ಹೆಚ್ಚಾಗಿದೆ. ಕಿಡಿಗೇಡಿಗಳಿಗೆ ಇವರೇ ಕುಮ್ಮಕ್ಕು ನೀಡಿ ಗಲಭೆ ನಡೆಸಿದ್ದಾರೆ. ಅಲ್ಲದೇ, ನನ್ನ ಮನೆ ಮೇಲೆ ದಾಳಿ ನಡೆಸಲು ಪ್ರಚೋದಿಸಿದ್ದಾರೆ. ಹಾಗಿದ್ದೂ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿರುವ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಐಪಿಸಿ, ಕೆಪಿಡಿಎಲ್ಪಿ ಕಾಯ್ದೆ ಹಾಗೂ ಎಸ್ಸಿ-ಎಸ್ಟಿ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.