ಬೆಂಗಳೂರು: ಮುಂದಿನ ತಿಂಗಳಿನಿಂದ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಟಿಕೆಟ್ ಮತ್ತು ಟೋಕನ್‌ಗಾಗಿ ಸರದಿ ನಿಲ್ಲುವ ಕಿರಿಕಿರಿ ಇರುವುದಿಲ್ಲ. ಯಾಕೆಂದರೆ ಬಿಎಂಆರ್‌ಸಿಎಲ್ ಮಹತ್ವದ ಬದಲಾವಣೆಗಳಾಗಿ ಕ್ಯೂಆರ್ ಕೋಡ್ ಟಿಕೆಟಿಂಗ್ ಮತ್ತು ಪ್ರಿ ಪೇಯ್ಡ್ ಆಟೋ ಸ್ಟ್ಯಾಂಡ್ಸ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಸದ್ಯ ಟೋಕನ್, ಸ್ಮಾರ್ಟ್ ಕಾರ್ಡ್ ಮತ್ತು ಪಾಸ್ ಅನ್ನು ಬಳಸಿ ಪ್ರಯಾಣಿಸಲು ನಮ್ಮ ಮೆಟ್ರೋ ಅವಕಾಶ ಕಲ್ಪಿಸಿದೆ. ಮೆಟ್ರೋ ಪ್ರಯಾಣಿಕರಲ್ಲಿ ನಿತ್ಯ ಅಂದಾಜು ಶೇಕಡ 40ರಷ್ಟು ಮಂದಿ ಟೋಕನ್ ಬಳಕೆದಾರರಾಗಿದ್ದಾರೆ. ಹೀಗಾಗಿ ಅವರ ಅನುಕೂಲಕ್ಕೆ ಮುಂದಿನ ತಿಂಗಳು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದೇವೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವ್ಯವಸ್ಥೆಯಲ್ಲಿ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸಬಹುದಾಗಿದೆ. ಹೊಸ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೊಂಡರೆ ಚಿಲ್ಲರೆ ನೀಡುವ ಜಂಜಾಟ ತಪ್ಪಲಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಉಪಕರಣ ಮತ್ತು ಪೂರಕ ವ್ಯವಸ್ಥೆಯನ್ನು ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಲಿದ್ದೇವೆ ಎಂದಿದ್ದಾರೆ.
ಪ್ರೀ ಪೇಯ್ಡ್ ಆಟೋ ಸ್ಟ್ಯಾಂಡ್: ಪ್ರಯಾಣಿಕರ ಅನುಕೂಲಕ್ಕಾಗಿ ನಗರ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದು, ಅವರ ಸಹಯೋಗದಲ್ಲಿ ಹಂತ-1ರ 10 ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಹಂತ-2ರ ಕಾರ್ಯಾಚರಣೆಯ ನಿಲ್ದಾಣಗಳಲ್ಲಿ ಪ್ರೀ-ಪೇಯ್ಡ್ ಆಟೋ ಸ್ಟಾಂಡ್‌ಗಳನ್ನು ಅತಿ ಶೀಘ್ರದಲ್ಲೇ ತೆರೆಯಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ದೇಶದ ಮೆಟ್ರೋ ಇತಿಹಾಸದಲ್ಲಿ ಹೊಸ ಮೈಲಿಗಲ್ಲು.. ಎಂ. ಜಿ ರಸ್ತೆಯ ನಿಲ್ದಾಣದಲ್ಲಿ 5ಜಿ ನೆಟ್ವರ್ಕ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿ..