ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಂಕ್ಚರ್ ಮಾಫಿಯಾ ಸಕ್ರಿಯವಾಗಿದೆಯೇ? ಎಂಬ ಅನುಮಾನ ವ್ಯಕ್ತವಾಗಿದೆ. ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ ಸಂಚಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ರಸ್ತೆಗಳಲ್ಲಿ ಕೆಜಿ ಗಟ್ಟಲೆ ಮೊಳೆಗಳನ್ನು ಸಂಗ್ರಹಿಸಿದ್ದಾರೆ. ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹಮ್ಮದ್ ಅಲಿ ಇಮ್ರಾನ್ ಆನೆಪಾಳ್ಯ, ನಂಜಪ್ಪ ಜಂಕ್ಷನ್, ಅಪೇರಾ ಜಂಕ್ಷನ್ ಸೇರಿದಂತೆ ಕೆಲವೇ ದೂರದಲ್ಲಿ ರಾಶಿಗಟ್ಟಲೆ ಮೊಳೆ, ಕಬ್ಬಿಣದ ತುಂಡುಗಳನ್ನು ಸಂಗ್ರಹ ಮಾಡಿದ್ದು, ಪಂಚರ್ ಮಾಫಿಯಾದ ಕೈಚಳಕವಿರುವ ಬಗ್ಗೆ ಅನುಮಾನ ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹಲವು ವಾಹನಗಳ ಚಕ್ರಗಳು ಮೊಳೆಗಳಿಂದಾಗಿ ಪಂಕ್ಚರ್ ಆಗುತ್ತಿರುವುದರಿಂದ ಮಾಲೀಕರ ಜೇಬಿಗೆ ಕತ್ತರಿ ಬೀಳುತ್ತಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮೊಳೆಗಳು ಕಂಡುಬರುತ್ತಿದ್ದು, ಇದರ ಹಿಂದೆ ಪಂಕ್ಚರ್ ಮಾಫಿಯಾದ ಕೈವಾಡವಿದೆ ಎನ್ನಲಾಗುತ್ತಿದೆ. ಅತಿ ಹೆಚ್ಚು ವಾಹನಗಳ ಓಡಾಟ ಹೊಂದಿರುವ ನಗರಗಳಲ್ಲಿ ಬೆಂಗಳೂರು ಸಹ ಒಂದು. ಇದನ್ನೇ ಗುರಿಯಾಗಿಸಿಕೊಂಡು ಎಲ್ಲೆಂದರಲ್ಲಿ ಮೊಳೆಗಳನ್ನು ಎಸೆಯಲಾಗುತ್ತಿದ್ದು, ರಸ್ತೆಗಳಲ್ಲಿ ಓಡಾಡುವ ವಾಹನಗಳ ಚಕ್ರಗಳು, ಮೊಳೆ ಸಿಲುಕಿ ಪಂಕ್ಚರ್ ಆಗುತ್ತಿವೆ. ನಗರದ ಕೆಲ ಪಂಕ್ಚರ್ ಅಂಗಡಿಯವರು ಮೊಳೆ ಎಸೆಯುತ್ತಿರುವ ಬಗ್ಗೆ ಅನುಮಾನವಿದೆ.
ಹಣ್ಣಿನ ಅಂಗಡಿಗೆ ಬಿದ್ದ ಬೆಂಕಿ, ಲಕ್ಷಾಂತರ ನಷ್ಟ: ದೊಡ್ಡಬಳ್ಳಾಪುರದಲ್ಲಿ ಹಣ್ಣಿನ ವ್ಯಾಪಾರಿಯೊಬ್ಬ 2 ಲಕ್ಷ ರೂ ಸಾಲ ಮಾಡಿ ಅಂಗಡಿಯಲ್ಲಿ ಹಣ್ಣುಗಳ ದಾಸ್ತಾನು ಮಾಡಿದ್ದನು. ಹಣ್ಣಿನ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣುಗಳು ಬೆಂಕಿಗಾಹುತಿಯಾಗಿವೆ.
ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಘಟನೆ ನಡೆದಿದೆ. ರಫೀಕ್ ಎಂಬುವರ ಹಣ್ಣಿನ ಅಂಗಡಿ ಬೆಂಕಿ ಅವಘಡಕ್ಕೆ ತುತ್ತಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಖರೀದಿ ಮಾಡಲಾಗಿದ್ದ ಎರಡು ಲಕ್ಷ ಮೌಲ್ಯದ ಹಣ್ಣುಗಳನ್ನು ಅಂಗಡಿಯಲ್ಲಿ ದಾಸ್ತಾನು ಮಾಡಿದ್ದರು. ಹಣ್ಣುಗಳನ್ನು ಜೋಡಿಸಿ ಇಟ್ಟ ರಫೀಕ್ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಮನೆಗೆ ಹೋಗಿ ಮಲಗಿದ್ದರು. ಮುಂಜಾನೆ ಸುಮಾರು 4 ಗಂಟೆಗೆ ಅಂಗಡಿಗೆ ಬೆಂಕಿ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಾಗಲೇ ಅಂಗಡಿ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿತ್ತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅಂಗಡಿ ಸುಟ್ಟು ಹೋಗಿತ್ತು. ಅಂಗಡಿ ಒಳಗಿದ್ದ 2 ಲಕ್ಷ ರೂ ಮೌಲ್ಯದ ಹಣ್ಣುಗಳು ಕೂಡ ಸುಟ್ಟು ಕರಕಲಾಗಿದ್ದವು.
ಹಣ್ಣಿನ ವ್ಯಾಪಾರ ಮಾಡುವ ಕಾರಣಕ್ಕೆ ಫೈನಾನ್ಸರ್ ಬಳಿ ಎರಡು ಲಕ್ಷ ರೂಪಾಯಿ ಸಾಲ ಮಾಡಿದ್ದ ರಫೀಕ್ ಬೆಂಗಳೂರಿನಿಂದ ಹಣ್ಣುಗಳ ಖರೀದಿಸಿ ಅಂಗಡಿಗೆ ತಂದಿದ್ದರು. ಬೆಂಕಿ ಅನಾಹುತದಲ್ಲಿ 2 ಲಕ್ಷ ಮೌಲ್ಯದ ಹಣ್ಣುಗಳು ಬೆಂಕಿಗಾಹುತಿಯಾಗಿದ್ದು, ನಷ್ಟದ ಹೊರೆಯಿಂದ ರಫೀಕ್ ಕಂಗಲಾಗಿದ್ದಾರೆ.
ಇದನ್ನೂ ಓದಿ: ಮಗಳನ್ನು ಜೀವಂತ ಸುಟ್ಟು ಹಾಕಿದ ತಂದೆ; ಪಾಕ್‌ನಲ್ಲಿ ಅಮಾನವೀಯ ಮರ್ಯಾದಾ ಹತ್ಯೆ