ಬೆಂಗಳೂರು: ಸಾರ್ವಜನಿಕರ ಹಣವು ಹೇಗೆ ಪೋಲಾಗುತ್ತದೆ ಎಂಬುದಕ್ಕೆ, ಸರ್ಕಾರವು ರಾಜ್ಯದ ವಿವಿಧ ನಗರಗಳಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳೇ ಸಾಕ್ಷಿ. ಜನರ ತೆರಿಗೆ ಹಣ ಹಾಗೂ ಸರ್ಕಾರದ ವಿಶೇಷ ಅನುದಾನಗಳಲ್ಲಿ ನಿರ್ಮಿಸಿರುವ, ನೂರಾರು ವಾಣಿಜ್ಯ ಮಳಿಗೆಗಳು ಕೆಲವೆಡೆ ಸದ್ಬಳಕೆ ಆಗದೇ, ಭೂತ ಬಂಗಲೆಯಾಗಿ ಪರಿವರ್ತನೆಗೊಂಡಿವೆ.
ಬೆಳಗಾವಿ ನಗರದ ನಿವಾಸಿಗಳಿಂದ ಆಸ್ತಿ ತೆರಿಗೆ ರೂಪದಲ್ಲಿ, ಪ್ರತಿವರ್ಷ ಮಹಾನಗರ ಪಾಲಿಕೆಗೆ 60 ಕೋಟಿಗೂ ಅಧಿಕ ಹಣ ಸಂಗ್ರವಾಗುತ್ತದೆ. ಅಲ್ಲದೇ ರಾಜ್ಯ ಸರ್ಕಾರದ ನಗರೊತ್ಥಾನ ಯೋಜನೆಯಡಿಯಲ್ಲಿ 100 ಕೋಟಿ ರೂ. ಪ್ರತಿವರ್ಷ ಬರುತ್ತದೆ. ಇದರ ಜತೆಗೆ ಪಾಲಿಕೆಗೆ ಪ್ರತಿವರ್ಷ ಕೋಟ್ಯಂತರ ರೂ. ಸಂಗ್ರಹವಾಗುವ ಸಂಪನ್ಮೂಲವಿದೆ. ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿ ಆಗಬೇಕಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರು ಸರ್ಕಾರದ ಅನುದಾನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
2010 ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಖರ್ಚಾಗದೇ ಉಳಿದ ಹಣದಲ್ಲಿ, ಕಾಂಗ್ರೆಸ್ ರಸ್ತೆಯಲ್ಲಿ 50 ಕ್ಕೂ ಅಧಿಕ ಮಳಿಗೆ ನಿರ್ಮಿಸಲಾಗಿದೆ. ಇವುಗಳನ್ನು ಲೀಸ್ ಇಲ್ಲವೇ ಬಾಡಿಗೆ ಆಧಾರದ ವ್ಯಾಪಾರಸ್ಥರಿಗೆ ನೀಡಲು ಮಹಾನಗರ ಪಾಲಿಕೆ ಮೀನಮೇಷ ಎಣಿಸುತ್ತಿದೆ. ಪ್ರತಿ ಮಳಿಗೆಯನ್ನು ತಿಂಗಳಿಗೆ 10 ಸಾವಿರದಂತೆ ಬಾಡಿಗೆಗೆ ನೀಡಿದರೆ ತಿಂಗಳಿಗೆ ಐದು ಲಕ್ಷ ರೂ. ಪಾಲಿಕೆಗೆ ಸಂಗ್ರಹವಾಗುತ್ತದೆ. ಇದೇ ರೀತಿ ಪಾಲಿಕೆಯ ತೆರಿಗೆ ಹಣದಲ್ಲಿ ಫಿಶ್ ಮಾರ್ಕೆಟ್, ಕಸಾಯಿಗಲ್ಲಿ ಹಾಗೂ ಸರದಾರ ಮೈದಾನದಲ್ಲಿ ಐವತ್ತಕ್ಕೂ ಅಧಿಕ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಇವುಗಳನ್ನು ಕೂಡ ಲೀಸ್ ಇಲ್ಲವೇ ಬಾಡಿಗೆ ಮೇಲೆ ನೀಡಲಾಗಿಲ್ಲ.
ಇನ್ನು ಪಾಲಿಕೆಗೆ ಸೇರಿದ ನೂರಾರು ಹಳೆಯ ಕಟ್ಟಡಗಳಿದ್ದು, ಲೀಸ್ ಅವಧಿಯೂ ಮುಗಿದು ದಶಕಗಳೇ ಉರಳಿವೆ. ಹಳೆಯ ದರದಲ್ಲೇ ಬಾಡಿಗೆ ವಸೂಲಿ ಮಾಡಲಾಗುತ್ತಿದ್ದು, ಸದ್ಯದ ಮಾರುಕಟ್ಟೆಗೆ ತಕ್ಕಂತೆ ಬಾಡಿಗೆ ದರ ಪರಿಷ್ಕರಿಸಲು ಪಾಲಿಕೆ ಹಿಂದೇಟು ಹಾಕುತ್ತಿದೆ. ಹಳೆಯ ಕಟ್ಟಡಗಳ ದರ ಪರಿಷ್ಕರಣೆ, ಹಾಗೂ ಹೊಸ ಕಟ್ಟಡಗಳ ಲೀಸ್ ಇಲ್ಲವೇ ಬಾಡಿಗೆಗೆ ನೀಡಿದರೆ ಪ್ರತಿ ತಿಂಗಳು ಪಾಲಿಕೆಗೆ ಕೋಟ್ಯಂತರ ರೂ. ಹರಿದು ಬರುತ್ತದೆ. ಆದರೆ ಈ ರೀತಿ ಕ್ರಮ ವಹಿಸಲು ಸದಸ್ಯರು ಮುಂದಾಗುತ್ತಿಲ್ಲ ಹಾಗು ಪಾಲಿಕೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಇನ್ನು ಗಣಿ ನಗರಿ ಬಳ್ಳಾರಿಯಲ್ಲಿ ಸಾರ್ವಜನಿಕರ ತೆರಿಗೆ ಹಣವು ಸದ್ಬಳಿಕೆಯಾಗುತ್ತಿದ್ದು, ಮಹಾನಗರ ಪಾಲಿಕೆ ವತಿಯಿಂದ ಅಂದಾಜು ಮೂರು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆಯನ್ನ ನಿರ್ಮಿಸಲಾಗುತ್ತಿದೆ. ಹೊಸದಾದ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಲಾಗಿದ್ದು, ಹಾಗೂ ಬಹುದಿನಗಳಿಂದಲೂ ನೆನೆಗುದಿಗೆ ಬಿದ್ದಿದ್ದ ದೊಡ್ಡ ಮಾರುಕಟ್ಟೆಯ ಕಟ್ಟಡವನ್ನು ಪೂರ್ಣಗೊಳಿಸಿ ಬೀದಿಬದಿ ಹಾಗೂ ತರಕಾರಿ ಮಾರಾಟಗಾರರ ಸೇವೆಗೆ ಲೋಕಾರ್ಪಣೆ ಮಾಡಲಾಗಿದೆ.
ರಾಜ್ಯದ ಕೆಲ ನಗರಗಳಲ್ಲಿ ಬಿಟ್ಟರೆ, ಬಹುತೇಕ ಕಡೆಗಳಲ್ಲಿ ಸರ್ಕಾರದ ವಾಣಿಜ್ಯ ಮಳಿಗೆಗಳು ಬಳಕೆ ಆಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಹಣ ನೀರಿನಂತೆ ಪೋಲಾಗುತ್ತಿರುವುದು ಹಿಡಿದ ಕನ್ನಡಿಯಾಗಿದೆ..