ಬೆಂಗಳೂರು: ಪಿಎಸ್ಐ ಅಕ್ರಮದಲ್ಲಿ ಜೈಲು ಸೇರಿರುವ ಎಡಿಜಿಪಿ ಅಮೃತ್ ಪೌಲ್ ಕುಟುಂಬಸ್ಥರು ಇದೇ ಮೊದಲ ಬಾರಿಗೆ ತಂದೆಯ ಬಂಧನ ಕುರಿತು ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ನನ್ನ ತಂದೆ ಯಾವುದೇ ತಪ್ಪನ್ನು ಮಾಡಿಲ್ಲ. ಈ ಕೇಸ್ ನಲ್ಲಿ ನನ್ನ ತಂದೆ ನಿರಪರಾಧಿ ಎಂದು ಅಮೃತ್ ಪೌಲ್ ಪುತ್ರಿ ನುಹಾರ್ ಬನ್ಸಾಲ್ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.
ನನ್ನ ತಂದೆ ಐದು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಕೋರ್ಟ್ನಲ್ಲಿ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿದ್ದು, ಅಮೃತ್ ಪೌಲ್ ಒಬ್ಬ ಪ್ರಾಮಾಣಿಕ ಮತ್ತು ದಕ್ಷ ಐಪಿಎಸ್ ಅಧಿಕಾರಿ. ಆದರೆ ನನ್ನ ತಂದೆಯನ್ನು ಯಾಕಾಗಿ ಜೈಲಿನಲ್ಲಿ ಹಾಕಿದ್ದಾರೊ ಗೊತ್ತಿಲ್ಲ, ಅವರು ಅಮಾಯಕ. ಮಾನಸಿಕ ಹಾಗೂ ದೈಹಿಕವಾಗಿ ಕುಟುಂಬಸ್ಥರು ನೋವು ಅನುಭವಿಸುತ್ತಿದ್ದೇವೆ. ಅವರು ಜೈಲಿನಲ್ಲಿರೋದರಿಂದ ಆರ್ಥಿಕವಾಗಿಯೂ ಕುಟುಂಬಸ್ಥರಿಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಜುಲೈ 22 ರಿಂದ ತಂದೆಯವರ ಬ್ಯಾಂಕ್ ಖಾತೆಯನ್ನೂ ತಡೆಹಿಡಿಯಲಾಗಿದೆ. ಇಎಂಐ ಕಟ್ಟಲಾಗದೇ ಸಾಕಷ್ಟು ದಂಡ ಕೂಡ ವಿಧಿಸಲಾಗುತ್ತಿದೆ. ತಂದೆ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್ಶೀಟ್ನಲ್ಲಿ ಸಾಕಷ್ಟು ಲೋಪದೋಷಗಳಿವೆ. ಇದನ್ನು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದು ನಮಗೆ ನ್ಯಾಯ ಕೊಡಿಸಿ ಎಂದು ಎಡಿಜಿಪಿ ಅಮೃತ್ ಪೌಲ್ ಪುತ್ರಿ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಪಿಎಸ್ಐ ಪ್ರಕರಣದ ಆರೋಪಿಗಳಿಗೆ ಇಡಿ ಶಾಕ್ : ಪ್ರಮುಖ ದಾಖಲೆಗಳ ವಶ