ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿನೇದಿನೆ ಬಂಧಿತರ ಸಂಖ್ಯೆ ಏರಿಕೆಯಾಗುತ್ತಿದೆ. ನೇಮಕಾತಿ ಪರೀಕ್ಷೆಯ ಮೋಸಜಾಲದಲ್ಲಿ ಭಾಗಿಯಾದ ಆರೋಪದಡಿ ರಿಸರ್ವ್ ಸಬ್ ಇನ್ಸ್ಪೆಕ್ಟರ್ (ಆರ್ಎಸ್ಐ) ಹಾಗೂ ಓರ್ವ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರ್ಎಸ್ಐ ಬಸವರಾಜ್ ಗುರೋಲ್ ಹಾಗೂ ಅಭ್ಯರ್ಥಿ ನಾರಾಯಣ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ಇಬ್ಬರು ಮಧ್ಯವರ್ತಿಗಳು ಸೇರಿ ಆರು ಮಂದಿ ಬಂಧಿಸಿದ ಸಿಐಡಿ
ಹಲವು ವರ್ಷಗಳಿಂದ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿಯಾಗಿರುವ ಡಿವೈಎಸ್ಪಿ ಶಾಂತಕುಮಾರ್ ಜೊತೆ ಬಸವರಾಜ್ ಕಾರ್ಯನಿರ್ವಹಿಸುತ್ತಿದ್ದ. ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ತಮ್ಮ ಸಂಪರ್ಕಕ್ಕೆ ಬರುವ ಆಭ್ಯರ್ಥಿಗಳ ಜೊತೆ ಡೀಲ್ ಕುದುರಿಸಿ ಹಣದ ವಹಿವಾಟು ನಡೆಸುತ್ತಿದ್ದ.
ಜೊತೆಗೆ ಸ್ಟ್ರಾಂಗ್ ರೂಮ್ನಲ್ಲಿರಬೇಕಾದ ಓಎಂಆರ್ ಶೀಟ್ ಇರುವ ಟ್ರಂಕ್ನ ಒನ್‌ಟೈಮ್ ಲಾಕ್ ಮನೆಯಲ್ಲಿ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಈತನೊಂದಿಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ 12ನೇ ಆರೋಪಿಯಾಗಿರುವ ನಾರಾಯಣ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
PSI ನೇಮಕಾತಿ ಹಗರಣದ ತನಿಖೆ ವೇಳೆ ಸ್ಪೋಟಕ ಮಾಹಿತಿ
ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿದ್ದ ಕಳಂಕಿತ ಅಭ್ಯರ್ಥಿಗಳು ಆರೋಪಿಯಾಗಿರುವ ಆರ್.ಡಿ.ಪಾಟೀಲ್ ಹಾಗೂ ದಿವ್ಯಾ ಹಾಗರಗಿ ಜೊತೆ ಹಣದ ಅವ್ಯವಹಾರ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಪಾಟೀಲ್ ಹಾಗೂ ದಿವ್ಯಾ ಹಾಗರಗಿ ಒಟ್ಟು 9 ಮಂದಿ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ. ಡೀಲ್ಗೊಳಗಾದ 9 ಮಂದಿ ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಒಬ್ಬೊಬ್ಬ ಅಭ್ಯರ್ಥಿಯಿಂದ 40ರಿಂದ 80 ಲಕ್ಷದವರೆಗೆ ಹಣ ಪಡೆದಿರುವ ಮಾಹಿತಿ ದೊರೆತಿದ್ದು, ಬ್ಯಾಂಕ್ನಲ್ಲಿ ಹಣ ವರ್ಗಾವಣೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: PSI ನೇಮಕಾತಿ ಅಕ್ರಮ: ಆರೋಪಿಯೊಬ್ಬನ ಮನೆಯಲ್ಲಿ 20ಲಕ್ಷ ನಗದು ಪತ್ತೆ!
ಮತ್ತೊಂದೆಡೆ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಆರೋಪಿಗಳಾದ ಗಜೇಂದ್ರ ಹಾಗೂ ಮನುಕುಮಾರ್ ಅಭ್ಯರ್ಥಿಗಳು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.