ಬೆಂಗಳೂರು: ಇದೇ 23ರಂದು ನಿಗದಿಯಾಗಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಮರುಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು ಜ.17ರ (ಬುಧವಾರ) ಬೆಳಗ್ಗೆ 11 ಗಂಟೆಯಿಂದ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.
ಅಭ್ಯರ್ಥಿಗಳು ಪ್ರಾಧಿಕಾರದ ಜಾಲತಾಣ http://kea.kar.nic.in ಗೆ ಭೇಟಿ ನೀಡಿ, ನಿಗದಿತ ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ, ಈ ಪ್ರಕ್ರಿಯೆ ಪೂರೈಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪರೀಕ್ಷೆಯು 23ರಂದು ನಿಗದಿತ ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ 12ರ ತನಕ ಪತ್ರಿಕೆ-1 ಮತ್ತು ಮಧ್ಯಾಹ್ನ 1ರಿಂದ 2.30ರ ತನಕ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ವಸ್ತ್ರಸಂಹಿತೆ ಸೇರಿದಂತೆ ಪ್ರತಿಯೊಂದು ಸೂಚನೆಯನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಾಧಿಕಾರ ಸೂಚಿಸಿದೆ. ಕರ್ನಾಟಕ ಸರ್ಕಾರ ಈಗಾಗಲೇ ನಿರ್ಧರಿಸಿದ ಪ್ರಕಾರ ಮತ್ತು ಹೈಕೋರ್ಟ್ ತೀರ್ಪಿನ ಪ್ರಕಾರ, ಮರುಪರೀಕ್ಷೆಗೆ ದಿನ ನಿಗದಿಯಾಗಿದೆ. ಜನವರಿ 23ರಂದು 545 ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಪಿಎಸ್ಐ ಮರುಪರೀಕ್ಷೆಗೆ ದಿನಾಂಕ ನಿಗದಿ; ಅಭ್ಯರ್ಥಿಗಳು ಪಾಲಿಸಬೇಕಾದ ಕಡ್ಡಾಯ ನಿಯಮಗಳಿವು
ಪೊಲೀಸ್ ಇಲಾಖೆಯ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮದ ಆರೋಪ ಎದುರಾದ ಕಾರಣ, ದೂರು ದಾಖಲಾಗಿದ್ದವು. ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‍ಪಾಲ್ ಸೇರಿ ಹಲವು ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು, ಪರೀಕ್ಷಾರ್ಥಿಗಳು ಬಂಧಿತರಾಗಿದ್ದರು. ಪರೀಕ್ಷಾ ಅಕ್ರಮ ನಡೆದಿದ್ದು ಖಚಿತವಾದ ಕೂಡಲೇ ನೇಮಕಾತಿ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅಹವಾಲು ಸ್ವೀಕರಿಸಿದ ಹೈಕೋರ್ಟ್, ಸುದೀರ್ಘ ವಿಚಾರಣೆ ನಡೆಸಿ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಸ್ವತಂತ್ರ ಪರೀಕ್ಷಾ ಸಂಸ್ಥೆಯ ಮೂಲಕ ಪರೀಕ್ಷೆ ನಡೆಸುವಂತೆಯೂ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಿತ್ತು. ಪ್ರಾಧಿಕಾರವು 2023 ಡಿ. 23ಕ್ಕೆ ಮರುಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಆದರೆ, ಮುಂದೂಡುವಂತೆ ಪರೀಕ್ಷಾರ್ಥಿಗಳಿಂದ ಒತ್ತಡ ಕೇಳಿ ಬಂದಿದ್ದರಿಂದ ಡಿಸೆಂಬರ್ 23ಕ್ಕೆ ನಿಗದಿಯಾಗಿದ್ದ ಮರುಪರೀಕ್ಷೆಯ ದಿನಾಂಕವನ್ನು ಒಂದು ತಿಂಗಳ ಕಾಲ ಮುಂದೂಡಲಾಗಿತ್ತು.
ಪಿಎಸ್ಐ ಪರೀಕ್ಷೆ ಮುಂದೂಡಿಕೆಗೆ ಅನೇಕರು ಮನವಿ ಮಾಡಿಕೊಂಡಿದ್ದರು. ಸಮಯಾವಕಾಶ ಬೇಕು ಎಂದು ಪರೀಕ್ಷಾರ್ಥಿಗಳು ಮನವಿ ಮಾಡಿದ್ದರು. ಸದನದಲ್ಲಿ ಯತ್ನಾಳ್ ಕೂಡ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದರು. ಅನೇಕ ಶಾಸಕರುಗಳು ಪಕ್ಷಾತೀತವಾಗಿ ಬೇಡಿಕೆಯನ್ನ ಇಟ್ಟಿದ್ದರು.