ಬೆಂಗಳೂರು: ನ್ಯಾಯಾಯುತ ಬೇಡಿಕೆಗಳಾದ ವೇತನ-ಭತ್ಯೆಗೆ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಹಾಗೂ ಅಧಿಕಾರಿ ಮತ್ತು ನೌಕರರು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ಚಿಕಿತ್ಸೆ ಪಡೆಯಲು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಿಗೆ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮನವಿ ಸಲ್ಲಿಸಿದರು.
ಈ ಕುರಿತು ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಫೆಬ್ರವರಿ 21 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯ ನಿರ್ಣಯದಂತೆ ಎಲ್ಲಾ ವೃಂದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಒಮ್ಮತ ತೀರ್ಮಾನದಂತೆ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಮಾರ್ಚ್ 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರು, ಸರ್ಕಾರದ ಅಧೀನಕ್ಕೊಳಪಡುವ ನೌಕರರು ದಿನಾಂಕ 2022 ರ ಜುಲೈ 1 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಆದಷ್ಟು ಬೇಗನೆ ಪಡೆದು, ಚುನಾವಣೆ ನೀತಿ ಸಂಹಿತೆಗಿಂತ ಮೊದಲು ಶೇ.40 ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಒತ್ತಾಯ ಮಾಡಿದರು.
ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ: ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್ ನೌಕರರನ್ನು ಓ.ಪಿ.ಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ಬಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಹೇಳಿದರು.
ಮನವಿ ಪತ್ರಗಳನ್ನು ಆದ್ಯತೆ ಮೇರೆಗೆ ಅತೀ ಜರೂರಾಗಿ ಪರಿಗಣಿಸಿ: ಹಲವಾರು ವರ್ಷಗಳಿಂದ ಸಂಘದ ವತಿಯಿಂದ ನೀಡಿರುವ ಮನವಿ ಪತ್ರ ಹಾಗೂ ಇದೇ ತಿಂಗಳು ಫೆಬ್ರವರಿ 9 ರಂದು ನ್ಯಾಯಾಯುತ ಬೇಡಿಕೆ ಆಗ್ರಹಿಸಿ ಹೋರಾಟ ಹಮ್ಮಿಕೊಂಡ ಸಂದರ್ಭದಲ್ಲಿ ನೀಡಿರುವ ಆಶ್ವಾಸನೆಯು ಸಕರಾತ್ಮಕವಾಗಿ ಸ್ಪಂದಿಸದೆ ಇರುವ ಕಾರಣ ನಮ್ಮ ಸಂಘದ ವತಿಯಿಂದ ನೀಡಿರುವ ಮನವಿ ಪತ್ರಗಳನ್ನು ಆದ್ಯತೆ ಮೇರೆಗೆ ಅತೀ ಜರೂರಾಗಿ ಪರಿಗಣಿಸಿ ಎಂದು ಎ. ಅಮೃತ್ ರಾಜ್ ಮನವಿ ಮಾಡಿದರು.
ಹಳೇ ಪಿಂಚಣಿಗೆ ಪಟ್ಟು ಯಾಕೆ?: ರಾಜ್ಯ ಸರ್ಕಾರ ತೆಗೆದುಕೊಂಡಿರುವ ಹೊಸ ಪಿಂಚಣಿ ನಿರ್ಧಾರ ರಾಜ್ಯ ಸರ್ಕಾರಿ ನೌಕರರ ಜೀವನಕ್ಕೆ ಹೊಡೆತ ನೀಡಿದಂತಾಗುತ್ತದೆ. ಹಾಗಂತ ಹಳೇ ಪಿಂಚಣಿ ಯೋಜನೆಯನ್ನೆ ಮುಂದುವರೆಸಿದರೇ ರಾಜ್ಯ ಬೊಕ್ಕಸದ ಮೇಲೆ ಪರಿಣಾಮ ಬೀರುತ್ತದೆ. ನೌಕರರಿಗೆ ಹಳೇ ಯೋಜನೆಯೆ ಮುಂದುವರಿದರೇ ಅವರ ನಿವೃತ್ತ ಜೀವನದ ನಂತರವೂ ಪೆನ್ಶನ್ ಬರುತ್ತದೆ. ಇದರಿಂದ ಅವರ ವೃದ್ಧಾಪ್ಯ ಕಾಲದಲ್ಲಿ ಸಹಾಯವಾಗುತ್ತದೆ.
ಆದರೆ ಹೊಸ ಪಿಂಚಣಿ ಯೋಜನೆ ಅಂದರೆ ಎನ್ಪಿಎಸ್ ಯೋಜನೆಯಲ್ಲಿ ಈ ಅವಕಾಶವಿಲ್ಲ. ಇದರಿಂದ ನೌಕರರು ಈಗ ತಂದಿರುವ ಯೋಜನೆಯನ್ನು ರದ್ದುಗೊಳಿಸಿ ಹಳೇ ಯೋಜನೆಯನ್ನು ಮುಂದುವರೆಸುವಂತೆ ಮುಷ್ಕರ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಸರ್ಕಾರಕ್ಕೆ ಇದರಿಂದಾಗಿರುವ ಸಮಸ್ಯೆ ಏನೆಂದರೆ OPS ಯೋಜನೆಯನ್ನು ಮುಂದುವರೆಸಿದರೆ 90,000 ಕೋಟಿ ವೆಚ್ಚ ತಗಲುತ್ತದೆ. ಇದರಿಂದ ಹಳೇ ಯೋಜನೆಯನ್ನು ಕೈ ಬಿಡುವ ನಿರ್ಧಾರ ಮಾಡಿದ್ದು. ಸದ್ಯ ಇತ್ತ ನೌಕರರ ಒತ್ತಾಯಕ್ಕೆ ಮಣಿಯದಿದ್ದರೇ ಎಲ್ಲಿ ಚುನಾವಣೆಗೆ ಹೊಡೆತ ಬೀರಲಿದೆ ಎಂಬ ತಲೆ ಬಿಸಿಯಲ್ಲಿರುವ ರಾಜ್ಯ ಸರ್ಕಾರಕ್ಕೆ ಎರಡು ದೋಣಿಯ ಮೇಲೆ ಕಾಲಿಟ್ಟಂತಹ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಬಿಸಿತುಪ್ಪವಾದ ಸರ್ಕಾರಿ ನೌಕರರ ವೇತನ ಪರಿಷ್ಕರಣೆ, OPS ಪಟ್ಟು; ಬೊಮ್ಮಾಯಿ ಸರ್ಕಾರದ ಕಾರ್ಯತಂತ್ರ ಏನು?