ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನೆಡೆಸುತ್ತಿದ್ದು, ಇದನ್ನು ಖಂಡಿಸಿ ನಗರದಲ್ಲಿ ನಿನ್ನೆ ಎನ್ಎಸ್ಯುಐ ಸಂಘಟನೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಜೊತೆಗೂಡಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದೆದುರು ಪ್ರತಿಭಟನೆ ನೆಡೆಸಲಾಯಿತು.
ರಾಜ್ಯ ಸರ್ಕಾರವೇ ಕೋವಿಡ್ ಸಮಯದಲ್ಲಿ ಯಾವುದೇ ಪರೀಕ್ಷೆಗಳನ್ನು ಭೌತಿಕವಾಗಿ ನೆಡೆಸಬಾರದೆಂದು ಆದೇಶಿಸಿದೆ. ಆದರೆ ಕಾನೂನು ವಿವಿ ಈಗಾಗಲೇ ಹಿಂದಿನ ಸೆಮಿಸ್ಟರ್ ಮುಗಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನೆಡೆಸಲು ಮುಂದಾಗಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಇದು ಒಳ್ಳೆಯದಲ್ಲ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಕೋವಿಡ್ ಹರಡುವ ಭೀತಿಯಿರುವ ಈ ಸಂದರ್ಭದಲ್ಲಿ ಬೇರೆ ಯಾವುದಾದರೂ ವಿಧಾನದಲ್ಲಿ ಪರೀಕ್ಷೆ ನೆಡೆಸಬಹುದಿತ್ತು. ಆದರೆ ಭೌತಿಕ ಪರೀಕ್ಷೆ ನೆಡೆಸಲು ಮುಂದಾಗಿದ್ದು, ವಿದ್ಯಾರ್ಥಿಗಳ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ. ಕೋವಿಡ್ ಸೋಂಕು ಹರಡಿದರೆ ವಿಶ್ವವಿದ್ಯಾನಿಲಯವೇ ಹೊಣೆಯಾಗಲಿದ್ದು, ಇದನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಯ ಮುಂದಾಳತ್ವವನ್ನು ಎನ್.ಎಸ್.ಯು.ಐ ರಾಜ್ಯ ಅಧ್ಯಕ್ಷರಾದ ಹೆಚ್.ಎಸ್. ಮಂಜುನಾಥ್, ಕಾರ್ಯದರ್ಶಿ ಮನೀಶ್ ವಹಿಸಿದ್ದರು. ಎನ್.ಎಸ್.ಯು.ಐ ಕಾರ್ಯಕರ್ತರು ಹಾಗೂ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.