ಬೆಂಗಳೂರು: ವಿನಾಶದ ಅಂಚಿನಲ್ಲಿರುವ ಅಪರೂಪದ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’(ಜಿಐಬಿ) ಪಕ್ಷಿ ಸಂಕುಲದ ರಕ್ಷಣೆ ಮತ್ತು ಅಭಿವೃದ್ಧಿಗೆ ಸಲಹೆ ನೀಡಲು ರಚಿಸಿರುವ ತಜ್ಞರ ಸಲಹಾ ಸಮಿತಿ ಮುಂದಿನ ಏಪ್ರಿಲ್‌ನಲ್ಲಿ ಪಕ್ಷಿಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಈ ಕುರಿತು ಬಳ್ಳಾರಿಯ ಪರಿಸರವಾದಿ ಎಡ್ವರ್ಡ್ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸರ್ಕಾರಿ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ತಜ್ಞರ ಸಮಿತಿ ಫೆ.7 ಮತ್ತು 20ರಂದು ಸಭೆ ನಡೆಸಿದೆ. ಪಕ್ಷಿ ಸಂಕುಲ ಇರುವ ಪ್ರದೇಶಕ್ಕೆ ಏಪ್ರಿಲ್‌ನಲ್ಲಿ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ತಿಳಿಸಿ, ಸಭೆಯ ನಡಾವಳಿಯನ್ನು ಪೀಠಕ್ಕೆ ಸಲ್ಲಿಸಿದರು.
ಅರ್ಜಿದಾರರ ಪರ ವಕೀಲರು ವಾದಿಸಿ, ತಜ್ಞರ ಸಮಿತಿ ಈವರೆಗೆ ಪಕ್ಷಿ ಸಂಕುಲವಿರುವ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಸಮಿತಿ ಸದಸ್ಯರಾದ ವೈಲ್ಡ್ ಲೈಫ್ ಆಫ್ ಇಂಡಿಯಾದ ವಿಜ್ಞಾನಿ ಡಾ.ಸುತೀರ್ಥ ದತ್ತ ಕರ್ನಾಟಕದವರಲ್ಲ. ಅವರಿಗೆ ರಾಜ್ಯದ ಪರಿಸರದ ಬಗ್ಗೆ ತಿಳಿದಿಲ್ಲ. ಅಂತಹವರು ಜಿಐಬಿ ಪಕ್ಷಿ ಸಂಕುಲವಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ ಪ್ರಯೋಜನವಿಲ್ಲ ಎಂದರು.
ಇದನ್ನು ಓದಿ: ಅಸ್ಸೋಂನಲ್ಲಿ ಎಜಿಪಿ, ಬಿಟಿಆರ್ ಜೊತೆ ಬಿಜೆಪಿ ಮೈತ್ರಿ ಘೋಷಿಸಲಿರುವ ನಡ್ಡಾ
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಜಿಐಬಿ ಪಕ್ಷಿ ಸಂಕುಲದ ಪ್ರದೇಶಕ್ಕೆ ಯಾರು ಭೇಟಿ ನೀಡಬೇಕು? ಪರಿಶೀಲನೆ ಹೇಗೆ ನಡೆಸಬೇಕು? ಎನ್ನವುದನ್ನು ನ್ಯಾಯಾಲಯ ಅಥವಾ ಅರ್ಜಿದಾರರು ನಿರ್ಧರಿಸಲಾಗದು. ಪಕ್ಷಿ ಸಂಕುಲದ ಅಧ್ಯಯನ ಮತ್ತು ಅವುಗಳ ರಕ್ಷಣೆಗೆ ಯಾವ ಕ್ರಮ ಕೈಗೊಳ್ಳಬೇಕೆಂಬುದು ತಜ್ಞರ ಸಮಿತಿಗೆ ಸಂಬಂಧಿಸಿದ ವಿಷಯ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಏ.7ಕ್ಕೆ ಮುಂದೂಡಿತು.
ಜಿಐಬಿ ದೇಶದಲ್ಲಿರುವ ಅತ್ಯಂತ ಅಪರೂಪದ ಪಕ್ಷಿ ಸಂಕುಲ. ಪಶ್ಚಿಮಘಟ್ಟ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಮಾತ್ರ ಕಾಣ ಸಿಗುತ್ತವೆ. ರಾಜ್ಯದಲ್ಲಿ ಬಳ್ಳಾರಿಯ ಸಿರಗುಪ್ಪೆಯಲ್ಲೂ ಈ ಪಕ್ಷಿಗಳಿವೆ. ಆದರೆ, ಈ ಪ್ರದೇಶದಲ್ಲಿ ಜೆಎಸ್‌ಡಬ್ಲ್ಯೂ ಸಂಸ್ಥೆ 250 ಎಕರೆ ಭೂಮಿ ಖರೀದಿಸಿ ವಾಚ್ ಟವರ್ ನಿರ್ಮಿಸುತ್ತಿದೆ. ಇದು ತಳಮಟ್ಟದಲ್ಲೇ ಹಾರಾಡುವ ಜಿಐಬಿ ಪಕ್ಷಿಗಳಿಗೆ ಮಾರಕವಾಗಿ ಪರಿಣಿಮಿಸಿದೆ. ಆದ್ದರಿಂದ, ಸ್ಥಳದಲ್ಲಿ ನಡೆಸುತ್ತಿರುವ ಕಾಮಗಾರಿ ಸ್ಥಗಿತಗೊಳಿಸಬೇಕು. ವಾಚ್ ಟವರ್‌ಗಳನ್ನು ತೆರವುಗೊಳಿಸಲು ಮತ್ತು ಜಿಐಬಿ ಪಕ್ಷಿಗಳ ಸಂರಕ್ಷಣೆಗೆ ಅಗತ್ಯ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.