ಬೆಂಗಳೂರು: ರಾಜ್ಯದ ಕೆಲವೆಡೆ ಬರ ಪರಿಸ್ಥಿತಿ ಹಿನ್ನೆಲೆ ಕುಡಿಯುವ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಿ, ಅಗತ್ಯವಿರುವಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ 15 ದಿನಕ್ಕೊಮ್ಮೆ ಕುಡಿಯುವ ನೀರು ಪರೀಕ್ಷೆ ಮಾಡುವಂತೆ 9 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಲಾಯಿತು.
ವಿಕಾಸಸೌಧದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಂಟಿ ಅಧ್ಯಕ್ಷತೆಯಲ್ಲಿ ಬೆಂಗಳೂರು ವಿಭಾಗದ 9 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಲಾಯಿತು. ಇಂದಿನ ಸಭೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ರಾಮನಗರದ ಎಲ್ಲಾ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಸರ್ಕಾರದ ಕಾರ್ಯದರ್ಶಿಗಳು, ಪೌರಾಡಳಿತ ನಿರ್ದೇಶಕರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಇಂದಿರಾ ಕ್ಯಾಂಟೀನ್ ತೆರೆಯಲು ಸೂಚನೆ: ಸರ್ಕಾರದ ಪ್ರಮುಖ ಯೋಜನೆಯಾದ ಇಂದಿರಾ ಕ್ಯಾಂಟೀನ್ನ್ನು ಕರ್ನಾಟಕದಾದ್ಯಂತ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಹಿಂದಿನ ಸಚಿವ ಸಂಪುಟದ ತೀರ್ಮಾನದಂತೆ 188 ಕಡೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕು. ಬಡ ಜನರಿಗೆ ಆಹಾರವನ್ನು ಒದಗಿಸುವಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಈ ಬಗ್ಗೆ ಸಚಿವರು ಎಲ್ಲಾ ಜಿಲ್ಲಾಧಿಕಾರಿಗಳು, ಆಯುಕ್ತರು ಹಾಗೂ ಯೋಜನಾ ನಿರ್ದೇಶಕರಿಗೆ ಕಟ್ಟುನಿಟ್ಟಿನ ಆದೇಶವನ್ನು ಒಂದು ತಿಂಗಳೊಳಗೆ ಜಾರಿಗೊಳಿಸಬೇಕೆಂದು ನಿರ್ದೇಶನ ನೀಡಲಾಯಿತು.
ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ನಡೆದ ಕಲುಷಿತ ನೀರು ಪ್ರಕರಣವು ರಾಜ್ಯದ ಯಾವೊಂದು ಸ್ಥಳೀಯ ಸಂಸ್ಥೆಗಳಲ್ಲಿಯೂ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ ಎಲ್ಲಾ 9 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರುಗಳಿಗೆ ಸೂಚನೆ ನೀಡಿದರು. ನೀರಿನ ಮೂಲಗಳನ್ನು ನಿರ್ವಹಣೆ ಮಾಡುವುದರ ಬಗ್ಗೆ ಸೂಚಿಸಲಾಯಿತು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೇರೆ ಬೇರೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ಪೌರಕಾರ್ಮಿಕರು ನಗರ ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭಗಳಾಗಿದ್ದು, ಇವರಿಗೆ ಗೃಹಭಾಗ್ಯ ಯೋಜನೆಯನ್ನು ಶೀಘ್ರದಲ್ಲೇ ಜಾರಿ ಮಾಡಬೇಕು. ಎಲ್ಲೆಲ್ಲಿ ಪೌರಕಾರ್ಮಿಕರನ್ನು ನೇಮಕಾತಿ ಮಾಡಿಲ್ಲವೋ ಅಲ್ಲಿ ಕೂಡಲೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ತಿಳಿಸಲಾಯಿತು.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 15ನೇ ಹಣಕಾಸು ಆಯೋಗದಂತೆ ಅನುದಾನ ಬಿಡುಗಡೆ ಮಾಡಿರುವ ಯೋಜನೆಯ ಅನುಷ್ಠಾನದ ಬಗ್ಗೆ ಜಿಲ್ಲಾವಾರು ಪರಿಶೀಲನೆ ನಡೆಸಲಾಯಿತು. ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್‌ಗಳು ಯಾವ ರೀತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರು ವಿಭಾಗದಲ್ಲಿ ಪೌರಕಾರ್ಮಿಕರು ಎಷ್ಟು ಜನ ಕಾರ್ಯ ನಿರ್ವಹಿಸುತ್ತಿರುತ್ತಾರೆಂದು ಮಾಹಿತಿಯನ್ನು ಪಡೆದು ಖಾಲಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಸೂಚನೆ ನೀಡಲಾಯಿತು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಯಾವ ರೀತಿ ವಸೂಲಿ ಆಗುತ್ತಿದೆ ಎಂಬುದರ ಬಗ್ಗೆ ಎಲ್ಲಾ ಮಾಹಿತಿ ಪಡೆಯಲಾಯಿತು. ಆಸ್ತಿ ತೆರಿಗೆ ಕಟ್ಟುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಹಾಗೂ ನಗರ ಸ್ಥಳೀಯ ಸಂಸ್ಥೆಗಳು ನೀರಿನ ಬಿಲ್‌ಗಳು, ಮಳಿಗೆಗಳ ಬಾಡಿಗೆ ಮತ್ತು ಟ್ರೇಡ್ ಲೈಸನ್ಸ್ ಶುಲ್ಕವನ್ನು ವಸೂಲಿ ಮಾಡುವಂತೆ ತಿಳಿಸಲಾಯಿತು.
ಇ-ಆಸ್ತಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಜಾಹೀರಾತು ಶುಲ್ಕವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದರ ಕುರಿತು ನಿರ್ದೇಶನ ನೀಡಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡಗಳಿಗೆ ನೀಡುತ್ತಿರುವ ಪರವಾನಗಿಯನ್ನು ಕ್ರಮಬದ್ಧವಾಗಿ ಮಾಡಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇದನ್ನೂ ಓದಿ: ಸೆಪ್ಟೆಂಬರ್ 4ರಂದು ಬರಪೀಡಿತ ತಾಲೂಕಗಳ ಹೆಸರು ಘೋಷಣೆ: ಸಿಎಂ ಸಿದ್ದರಾಮಯ್ಯ