ಬೆಂಗಳೂರು : 2020-21ನೇ ಸಾಲಿನಲ್ಲಿ 153.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ. ದೇಶದ ಸರಾಸರಿಗೆ ಹೋಲಿಸಿದರೆ ಶೇ. 2ರಷ್ಟು ಹಾಗೂ ರಾಜ್ಯದ ಸರಾಸರಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಿನ ಉತ್ಪಾದನೆ ಆಗಿದೆ. ಮುಂಗಾರು ಹಂಗಾಮಿನ ಬಿತ್ತನೆ ಗುರಿ 77 ಲಕ್ಷ ಹೆಕ್ಟೇರ್ ಇದೆ. ಶೇಕಡಾವಾರು ಬಿತ್ತನೆ ಶೇ.15.23ರಷ್ಟಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಬಿತ್ತನೆ ಬೀಜದ ಬೇಡಿಕೆ 60 ಲಕ್ಷ ಕ್ವಿಂಟಾಲ್ ಇದೆ. ಆದರೆ, ಲಭ್ಯತೆ 7.74 ಲಕ್ಷ ಕ್ವಿಂಟಾಲ್ ಇದೆ. ದಾಸ್ತಾನು 1.15 ಲಕ್ಷ ಕ್ವಿಂಟಾಲ್ ಇದೆ. ರಸಗೊಬ್ಬರ ಬೇಡಿಕೆ ಒಟ್ಟು 12, 77,815 ಇದೆ. ದಾಸ್ತಾನು 19,56,825ರಷ್ಟು ಇದೆ ಎಂದು ಹೇಳಿದರು.
ಬೆಳೆ ಸಮೀಕ್ಷೆ : ಬೆಳೆ ಸಮೀಕ್ಷೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ 2.10 ಕೋಟಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆ್ಯಪ್ ಮೂಲಕ ಅಪ್ಲೋಡ್ ಮಾಡಿಸುವ ಉದ್ದೇಶವನ್ನ ಕೃಷಿ ಇಲಾಖೆ ಹೊಂದಿದೆ. 2020-21ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಾಲಿನ್ ವಿತರಣೆ ಮಾಡಲಾಗಿದೆ ಎಂದರು.
ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ ಅನ್ವಯ ಕೇಂದ್ರ ಸರ್ಕಾರದಿಂದ 55,07,256 ರೈತರಿಗೆ 7017.1520 ರೂ. ನೆರವು ನೀಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರದಿಂದ 49,18,986 ರೈತರಿಗೆ 2849.1632 ರೂ. ನೆರವು ನೀಡಲಾಗಿದೆ ಎಂದು ವಿವರಿಸಿದರು.
ಮಿನಿ ಕಿಟ್ ವಿತರಣೆ : ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಮಿನಿ ಕಿಟ್ ವಿತರಣೆ ಮಾಡಲಾಗುತ್ತಿದೆ. ತೊಗರಿ, ಹೆಸರು, ಶೇಂಗಾ, ಸೋಯಾ ಅವರೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ಬಿತ್ತನೆ ಬೀಜವನ್ನು ಮಿನಿಕಿಟ್ ರೂಪದಲ್ಲಿ ಪ್ರಮುಖವಾಗಿ ಬೆಳೆಯುವ 19 ಜಿಲ್ಲೆಗಳಲ್ಲಿ ವಿತರಿಸಲು ಕಾರ್ಯತಂತ್ರ ರೂಪಿಸಿದೆ.
ತೊಗರಿ (4 ಕೆಜಿ/ಪ್ರತಿ ಕಿಟ್‌ಗೆ)-16 ಜಿಲ್ಲೆಗಳು ಹೆಸರು (4 ಕೆಜಿ ಪ್ರತಿ ಕಿಟ್‌ಗೆ)-4 ಜಿಲ್ಲೆಗಳು ಶೇಂಗಾ (20 ಕೆಜಿ (ಪ್ರತಿ ಕಿಟ್‌ಗೆ)-8 ಜಿಲ್ಲೆಗಳು ಸೋಯಾ ಅವರೆ (8 ಕೆಜಿ/ಪ್ರತಿ ಕಿಟ್‌ಗೆ) -2 ಜಿಲ್ಲೆಗಳಿಗೆ 2,35,865 ಕಿಟ್ಗಳನ್ನು 12.60 ಕೋಟಿ ರೂ. ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಗುಣ ನಿಯಂತ್ರಣ-ವಿಚಕ್ಷಣಾ ದಳದಿಂದ ಜಪ್ತಿ :( 01-04-2021 ರಿಂದ 11-06-2021ರವರಗೆ) :
1101.48 ಕ್ವಿಂಟಾಲ್ ಪ್ರಮಾಣದ ರೂ.394.88 ಲಕ್ಷ ಮೌಲ್ಯದ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಲಾಗಿದೆ. 960.03 ಕ್ವಿಂಟಾಲ್ ಪ್ರಮಾಣದ ರಸಗೊಬ್ಬರಗಳನ್ನು ಜಪ್ತಿ ಮಾಡಲಾಗಿದೆ. 479.37 ಲೀ/ಕೆಜಿ ಪ್ರಮಾಣದ ರೂ.7.74 ಲಕ್ಷ ಮೌಲ್ಯದ ಪೀಡೆನಾಶಕಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆಯಾಗಿ 2021-22ನೇ ಸಾಲಿನಲ್ಲಿ 424. 52 ಲಕ್ಷ ರೂ. ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳನ್ನು ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ ಎಂದರು.
2020-21ನೇ ಸಾಲಿನಲ್ಲಿ 1731.63 ಲಕ್ಷ ರೂ. ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡನಾಶಕಗಳನ್ನು ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಿ 263 ಈ ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ. 204 ಅಕ್ರಮ ಮಾರಾಟಗಾರರ ಲೈಸೆನ್ಸ್ ರದ್ಧು ಪಡಿಸಿದ್ದೇವೆ ಎಂದು ಮಾಹಿತಿ ನೀಡಿದರು. ರೈತರಿಗೆ ಬಿತ್ತನೆ ಬೀಜ ಗೊಬ್ಬರ ಉಚಿತವಾಗಿ ಕೊಡಲು ಸಿದ್ದರಾಮಯ್ಯ ಬೇಡಿಕೆಯನ್ನು ತಳ್ಳಿ ಹಾಕಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಸಿದ್ದರಾಮಯ್ಯ ಸಿಎಂ ಆಗಿದ್ದರೆ ಮಾಡುತ್ತಿದ್ದರಾ? ಉಚಿತವಾಗಿ ರೈತರಿಗೆ ರಸಗೊಬ್ಬರ ನೀಡುತ್ತಿದ್ದರಾ? ಎಂದು ಪ್ರಶ್ನಿಸಿದರು.
ರೈತರ ಅನುಕೂಲಕ್ಕಾಗಿ ಏನು ಮಾಡಬೇಕು ಅದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಸಂಪೂರ್ಣ ಉಚಿತ ಕೊಡಲು ಸಾಧ್ಯವಿಲ್ಲ. ಇದು ಅವೈಜ್ಞಾನಿಕ ಎಂದರು. ಗೊಬ್ಬರದಲ್ಲಿ 1000 ಸಬ್ಸಿಡಿ ಕೊಡುತ್ತಿದ್ದೇವೆ. ರಸಗೊಬ್ಬರ ಕೊರತೆ ಇಲ್ಲ, ಕೊರತೆ ಇದ್ದರೆ ಅದನ್ನು ಸರಿಪಡಿಸಲು ಸರ್ಕಾರ ಬದ್ಧ. ಆಧಾರ್ ಲಿಂಕ್ ಮಾಡುವುದರಲ್ಲಿ ಕರ್ನಾಟಕ ನಂಬರ್ ಒನ್ ಇದೆ ಎಂದು ಹೇಳಿದರು. ನ್ಯಾನೋ ಯೂರಿಯಾ ಬಂದಿದೆ. ಅರ್ಧ ಲೀಟರ್ಗೆ 250 ರೂ. ಬೀಳಲಿದೆ. ಇದು ಒಂದು ಚೀಲ ಯೂರಿಯಾ ಗೊಬ್ಬರಕ್ಕೆ ಸಮ ಎಂದು ತಿಳಿಸಿದರು.