ಬೆಂಗಳೂರು: ವಿಕ್ಟೋರಿಯಾದಲ್ಲಿ ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಖಾಸಗಿ ಆಸ್ಪತ್ರೆಗಳು, ಹೊರರೋಗಿ ಚಿಕಿತ್ಸಾ ವಿಭಾಗವನ್ನು ಸಂಜೆ ಆರು ಗಂಟೆಯವರೆಗೆ ಬಂದ್ ಮಾಡಿದೆ. ಭಾರತೀಯ ವೈದ್ಯಕೀಯ ಸಂಘ ಕೊಟ್ಟ ಬಂದ್ ಕರೆಗೆ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿವೆ.
ರಾಜಾಜಿನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆ, ಎಂ.ಎಸ್.ರಾಮಯ್ಯ ಆಸ್ಪತ್ರೆ, ಗೊರಗುಂಟೆ ಪಾಳ್ಯದಲ್ಲಿರುವ ಪೀಪಲ್ ಆಸ್ಪತ್ರೆಯ ಓಪಿಡಿ ಬಂದ್ ಆಗಿವೆ.
ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಮಾಡಲಾಗಿದೆ. ವೈದ್ಯರ ಮುಷ್ಕರ ಇದೆ,. ಓಪಿಡಿ ಇರಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಅಲ್ಲದೆ ಇಂದು ರೋಗಿಗಳು ತೆಗೆದುಕೊಂಡಿದ್ದ ಅಪಾಯಿಂಟ್ಮೆಂಟ್ ರದ್ದುಮಾಡಲಾಗಿದೆ.
ಇನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆಲ ನಿಗಧಿತ ಸರ್ಜರಿಗಳು, ತುರ್ತು ಚಿಕಿತ್ಸೆಗಳು ಎಂದಿನಂತೆ ನಡೆಯಲಿದ್ದು, ಮುಂಚಿತವಾಗಿ ಓಪಿಡಿ ಪೂರ್ವಾನುಮತಿ ತೆಗೆದುಕೊಂಡವರಿಗೂ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.