ಬೆಂಗಳೂರು : ಭರತ ಖಂಡ ಸಂಕಷ್ಟಕ್ಕೆ ಸಿಲುಕಿದಾಗ ಮತ್ತೆ ಜನ್ಮತಾಳುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದ. ಅದರಂತೆ ಈಗ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಕೃಷ್ಣನ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ ಎಂದು ಬಿಜೆಪಿ ಸದಸ್ಯ ಪ್ರಾಣೇಶ್ ಸದನದಲ್ಲಿ ಪ್ರಸ್ತಾಪಿಸಿ ಕೆಲಕಾಲ ಮಾತಿನ ಚಕಮಕಿಗೆ ವೇದಿಕೆ ಕಲ್ಪಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 68 ರ ಅಡಿ ಮಳೆಹಾನಿ ವಿಷಯದ ಮೇಲಿನ ಚರ್ಚೆಯ ವೇಳೆ ರಾಜ್ಯದ ಮಳೆಹಾನಿ ವಿಷಯಗಳನ್ನು ವಿವರಿಸಿ ಸಾಕಷ್ಟು ಮುಂದಾಲೋಚನೆಯಿಂದ ಪರಿಹಾರ ಕಾರ್ಯ ನಡೆಸಬೇಕು ಎಂದು ಸಲಹೆ ನೀಡಿದರು. ನಮ್ಮ ಪೂರ್ವಿಕರು ಭವಿಷ್ಯದ ದೃಷ್ಟಿಯಿಂದ ಯೋಜನೆಗಳನ್ನು ತರುತ್ತಿದ್ದರು. ಆದರೆ, ನಮ್ಮ ಕಾಲದಲ್ಲಿ ಕೇವಲ ತಾತ್ಕಾಲಿಕ ಯೋಜನೆಗಳ ತರುತ್ತಿದ್ದೇವೆ ಎಂದು ಹೇಳಿದರು.
ಕೃಷ್ಣನ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ : ಕುರುಕ್ಷೇತ್ರ ನಡೆಯುವ ವೇಳೆ ಅರ್ಜುನ ಕೃಷ್ಣನಿಗೆ ಒಂದು ಮಾತು ಕೇಳುತ್ತಾನೆ. ಎಲ್ಲವೂ ಹಣೆ ಬರಹದಲ್ಲಿ ಬರೆದಂತೆ ಆಗಲಿದೆ ಎಂದ ಮೇಲೆ ನನಗೆ ಗೆಲುವು ಸಿಗಲಿದೆ. ಅದಕ್ಕಾಗಿ ಇಷ್ಟೆಲ್ಲಾ ಸಾವು ನೋವು ಯಾಕೆ ಎನ್ನುತ್ತಾನೆ. ಅದಕ್ಕೆ ಕೃಷ್ಣ ಹಣೆ ಬರಹದಲ್ಲಿ ಪ್ರಯತ್ನ ಮಾಡಿದರಷ್ಟೇ ಗೆಲುವು ಅಂತಾ ಬರೆದಿದ್ದರೆ ಏನು ಮಾಡುತ್ತೀಯಾ?. ಹಾಗಾಗಿ ಯುದ್ದ ಮಾಡು ಎನ್ನುತ್ತಾನೆ.
ಅದರಂತೆ ನಾವು ಕೆಲಸ ಮಾಡಬೇಕಿದೆ. ಅದೇ ರೀತಿ ಕುರುಕ್ಷೇತ್ರ ಯುದ್ದ ಮುಗಿದ ನಂತರ ರಾಜ್ಯ ಸುಭೀಕ್ಷವಾದಾಗ ಕೃಷ್ಣ ಅಸ್ತಂಗತನಾಗುತ್ತಾನೆ. ಅದಕ್ಕೂ ಮೊದಲು ಈಗ ಭರತ ಖಂಡ ಸುಭೀಕ್ಷವಾಗಿದೆ. ಹಾಗಾಗಿ ನಾನಿನ್ನು ಅಸ್ತಂಗತನಾಗುತ್ತೇನೆ. ಮತ್ತೆ ಭರತ ಖಂಡ ಸಂಕಷ್ಟದಲ್ಲಿದ್ದಾಗ ಪುನರ್ಜನ್ಮ ಎತ್ತುತ್ತೇನೆ ಎಂದಿದ್ದರು. ಈಗ ಭಾರತಕ್ಕೆ ಸಂಕಷ್ಟ ಬಂದಿದೆ. ಕೃಷ್ಣನ ರೂಪದಲ್ಲಿ ಮೋದಿ ಬಂದಿದ್ದಾರೆ ಎಂದು ಹೇಳಿದರು.
ಇದಕ್ಕೆ ಟಾಂಗ್ ನೀಡಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಮೋದಿ ಇರಲಿ ಮೊದಲು ಮೋರಿ ಕ್ಲೀನ್ ಮಾಡಲಿ ಎಂದರು. ವಿಶ್ವ ಗುರು ಬಂದಿದ್ದಕ್ಕೆ ಇಡೀ ವಿಶ್ವಕ್ಕೆ ಕೋವಿಡ್ ಬಂದಿದ್ದು, ವ್ಯಾಕ್ಸಿನ್ ಮೊದಲೇ ಬಂದಿದ್ದರೆ ಲಕ್ಷಾಂತರ ಜನ ಬದುಕುತ್ತಿದ್ದರು. ವ್ಯಾಕ್ಸಿನ್ ಕೊಡಲು ಆರು ತಿಂಗಳು ಮಾಡಿದರು.
ಅದಕ್ಕೆ ಲಕ್ಷಾಂತರ ಜನ ಪ್ರಾಣ ತೆತ್ತರು. ಆರ್ಟಿಕಲ್ 370 ತೆಗೆದಿದ್ದಕ್ಕೆ ನಿತ್ಯ ಕಾಶ್ಮೀರಿ ಪಂಡಿತರ ಹತ್ಯೆಯಾಗುತ್ತಿದೆ.ಅಲ್ಲಿ ಒಂದಿಂಚೂ ಬೇರೆಯವರು ಖರೀದಿಸಲಾಗುತ್ತಿಲ್ಲ ಎಂದರು. ಲಸಿಕೆ ಟೀಕೆಗೆ ತಿರುಗೇಟು ನೀಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಪಕ್ಷವೇ ಲಸಿಕೆ ವಿಚಾರದಲ್ಲಿ ದಾರಿ ತಪ್ಪಿಸಿತು ಎಂದರು.
ಇದನ್ನೂ ಓದಿ : ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 2814 ಚಾಲಕರ ಹುದ್ದೆಗಳ ಶೀಘ್ರ ನೇಮಕ : ಸಚಿವ ಶ್ರೀರಾಮುಲು