ಬೆಂಗಳೂರು: ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಕೊಡುವ ಬಗ್ಗೆ ನಿಯಮಗಳ ತಿದ್ದುಪಡಿ ಮಾಡುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಒತ್ತಾಯಿಸಿದೆ. ಇಂದು ಸಂಘದ ನಿಯೋಗದ ಸದಸ್ಯರಾದ ಚಂದ್ರಶೇಖರ್ ನುಗ್ಗಲಿ ತಂಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ರಾಜ್ಯಾದ್ಯಂತ ವರ್ಗಾವಣಾ ಪ್ರಕ್ರಿಯೆಯಲ್ಲಿ ವಿಶೇಷವಾಗಿ ಶೇ.25ರಷ್ಟು ಖಾಲಿ ಹುದ್ದೆಗಳ ಮಿತಿಯಿಂದ ಶಿಕ್ಷಕರಿಗೆ ಆಗುತ್ತಿರುವ ತೊಂದರೆಗಳನ್ನು ಚರ್ಚಿಸಿದ್ದರು. ಜೊತೆಗೆ ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ಸಮಸ್ಯೆಗಳ ಬಗ್ಗೆ ಕೂಡ ವಿವರಿಸಿದರು.
ಹಾಗೆ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ಕಲ್ಪಿಸುವುದು, ಶೇ.25ರಷ್ಟು ಖಾಲಿ ಹುದ್ದೆಗಳ ಮಿತಿಯನ್ನು ಕೈಬಿಡುವುದು ಸೇರಿದಂತೆ ವರ್ಗಾವಣಾ ಕಾಯ್ದೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸೆಲ್ವಕುಮಾರ್, ಮುಂಬರುವ ಚಳಿಗಾಲದ ಅಧಿವೇಶನ ಅಥವಾ ಫೆಬ್ರವರಿ ಬಜೆಟ್ ಅಧಿವೇಶನದಲ್ಲಿ ನಿಯಮಗಳ ತಿದ್ದುಪಡಿಗಾಗಿ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಕೌನ್ಸಿಲಿಂಗ್ ಪ್ರಕ್ರಿಯೆ ಮಾಹಿತಿ :
ಮುಖ್ಯೋಪಾಧ್ಯಾಯರು- 435/1010
ಸಹ ಶಿಕ್ಷಕರು- 4239/15,747
ದೈಹಿಕ ಶಿಕ್ಷಕರು- 78/338
ವಿಶೇಷ ಶಿಕ್ಷಕರು- 0/4
ಒಟ್ಟು- 17,099 ರಲ್ಲಿ
ಈಗಾಗಲೇ 4742 ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಇದನ್ನೂ ಓದಿ: ಮತದಾರರಿಗೆ ಲಕ್ಷ ಲಕ್ಷ ಹಣದ ಆಮಿಷ: ಕೆಜಿಎಫ್ ಬಾಬು ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು